Search


ಚಾಮರಾಜನಗರ ಶೂಟೌಟ್‌ ಪ್ರಕರಣ; ಕಾಡಿಗೆ ಬೆಂಕಿ ಇಟ್ಟು ಅರಣ್ಯ ಇಲಾಖೆಗೆ ಕಾಟ ಕೊಡ್ತಿದ್ದಾರೆ ಕಿಡಿಗೇಡಿಗಳು

ಚಾಮರಾಜನಗರ: ಹನೂರು ವನ್ಯಜೀವಿ ಪ್ರದೇಶದಲ್ಲಿ ಮೂವರ ಎನ್‌ಕೌಂಟರ್‌ ಬೆನ್ನಲ್ಲೇ ಅರಣ್ಯ ಇಲಾಖೆಗೆ ಕಿಡಿಗೇಡಿಗಳ ಕಾಟ ಶುರುವಾಗಿದೆ. ಅರಣ್ಯ ಇಲಾಖೆಯನ್ನ ಗುರಿಯಾಗಿಸಿಕೊಂಡು ಕೆಲ ದುಷ್ಕರ್ಮಿಗಳು ಸರಣಿ ಕೃತ್ಯಗಳನ್ನ ಎಸಗುತ್ತಿದ್ದು. ಇದೀಗ ಮಲೆ ಮಹದೇಶ್ವರ ವನ್ಯಜೀವಿಧಾಮದ 10 ಎಕರೆ ಅರಣ್ಯ ಪ್ರದೇಶಕ್ಕೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ.

ಆಗಸ್ಟ್‌ 15ರಂದು ಅರಣ್ಯ ಇಲಾಖೆ ಸಿಬ್ಬಂದಿ ಕಾಡಿನಲ್ಲಿ ಕಾರ್ಯಚರಣೆ ನಡೆಸುತ್ತಿದ್ದ ವೇಳೆ ಬೇಟೆಗಾರರು ಎಂದು ಆರೋಪಿಸಿ ಮೂವರನ್ನ ಎನ್‌ಕೌಂಟರ್‌ ಮಾಡಿದ್ದರು. ಇದೊಂದು ಫೇಕ್‌ ಎನ್‌ಕೌಂಟರ್‌ ಎಂದು ಆರೋಪಿಸಿದ್ದ ಸ್ಥಳೀಯರು, ಅರಣ್ಯ ಇಲಾಖೆ ವಿರುದ್ಧ ಪ್ರತಿಭಟಿಸಿ ಆಕ್ರೋಶ ಹೊರ ಹಾಕಿದ್ದರು. ಇದಾದ ಬೆನ್ನಲ್ಲೇ ಅರಣ್ಯ ಇಲಾಕೆಗೆ ಕಿಡಿಗೇಡಿಗಳ ಕಾಟ ಶುರುವಾಗಿದೆ.

ಶೂಟೌಟ್ ಕೇಸ್: ಅರಣ್ಯಾಧಿಕಾರಿಗಳಿಂದ 12 ಸಿಬ್ಬಂದಿಯ ವಿಚಾರಣೆ, ಬಿಜೆಪಿಯಿಂದ ಸತ್ಯಶೋಧನಾ  ಸಮಿತಿ ರಚನೆ

ಕೊಳ್ಳೇಗಾಲ ತಾಲೂಕಿನ ಶಿಲುಬೆಪುರ ಅರಣ್ಯ ವ್ಯಾಪ್ತಿಯಲ್ಲಿ ಕಿಡಿಗೇಡಿಗಳು ಹಚ್ಚಿದ ಬೆಂಕಿಯ ಕೆನ್ನಾಲಿಗೆಗೆ ಬರೋಬ್ಬರಿ 10 ಎಕರೆ ಅರಣ್ಯ ಪ್ರದೇಶ ಸಂಪೂರ್ಣವಾಗಿ ಭಸ್ಮವಾಗಿದೆ. ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಹರಸಾಹಸ ಪಟ್ಟು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೂ ಮುನ್ನ ಕೆಲ ದಿನಗಳ ಹಿಂದೆ ವನ್ಯಜೀವಿಧಾಮದಲ್ಲಿರುವ ಕಳ್ಳಬೇಟೆ ತಡೆ ಶಿಬಿರಗಳನ್ನ ಗುರುಯಾಗಿಸಿಕೊಂಡು ಜಿಲಿಟಿನ್‌ ಕಡ್ಡಿ ಬಳಸಿ ನಾಲ್ಕು ಕ್ಯಾಂಪ್‌ಗಳನ್ನ ಸ್ಪೋಟಿಸಿದ್ದರು.

ಮೂವರು ಬೇಟೆಗಾರರ ಎನ್‌ಕೌಂಟರ್ ನಂತರ ಕಾಡಿನಲ್ಲಿ ದುಷ್ಕರ್ಮಿಗಳ ಹಾವಳಿ ಹೆಚ್ಚಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಪ್ರತಿದಿನ ಪ್ರಾಣಭಯದಲ್ಲೇ ಕರ್ತವ್ಯಕ್ಕೆ ಹಾಜರಾಗುವ ಸ್ಥಿತಿ ನಿರ್ಮಾಣವಾಗಿದೆ. ಮಲೆ ಮಹದೇಶ್ವರ ವನ್ಯಜೀವಿಧಾಮದ ಎಸಿಎಫ್ ವಿಜಯ್ ಹೊಸೂರು ಅವರು ಟಿವಿ9ಗೆ ನೀಡಿದ ಮಾಹಿತಿಯ ಪ್ರಕಾರ, ಘಟನೆಗೆ ಸಂಬಂಧಿಸಿದಂತೆ ತನಿಖೆ ತೀವ್ರಗೊಳಿಸಲಾಗಿದ್ದು, ಅರಣ್ಯಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳ ಪತ್ತೆಗೆ ಬಲೆ ಬೀಸಲಾಗಿದೆ.

By Ravikumar - 20-08-2026


Ads in Post