ಛತ್ತೀಸ್‌ಗಡ : ದೇಶದಲ್ಲಿ ನೂರಾರು ಕಿ.ಮೀಗಳಷ್ಟು ಎಕ್ಸ್‌ಪ್ರೆಸ್ ವೇಗಳು ನಿರ್ಮಾಣವಾಗುತ್ತಿದ್ದರು ಕೂಡ, ಗ್ರಾಮೀಣ ಪ್ರದೇಶದ ಜನರು ಇಂದಿಗೂ ಕನಿಷ್ಟ ಸೌಲಭ್ಯಗಳಿಲ್ಲಿದೆ ನರಳುತ್ತಿರುವುದಕ್ಕೆ ಜೀವಂತ ಉದಾಹರಣೆಯೊಂದು ದೊರಕಿದೆ. ಛತ್ತೀಸ್‌ಗಡದ ಮಹಿಳೆಯೊಬ್ಬರು ತನ್ನ ಅತ್ತೆಯ ಪಿಂಚಣಿ ಹಣವನ್ನ ಬ್ಯಾಂಕ್‌ನಿಂದ ಪಡೆಯಲು ಸುಮಾರು 9 ಕಿಮೀ ತನ್ನ ಅತ್ತೆಯನ್ನ ಬೆನ್ನ ಮೇಲೆ ಹೊತ್ತು ಬ್ಯಾಂಕ್‌ಗೆ ಬಂದಿದ್ದಾರೆ. ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಛತ್ತೀಸ್‌ಗಡದ, ಮೈನ್‌ಪತ್ ಬ್ಲಾಕ್‌ನ ಜಂಗಲ್‌ಪಾರಾ ಗ್ರಾಮದ ಸುಖ್ಮನಿಯಾ ಎಂಬಾಕೆ ತನ್ನ ಅತ್ತೆಯನ್ನ ನರ್ಮದಾಪುರದ ಸೆಂಟ್ರಲ್ ಬ್ಯಾಂಕ್‌ಗೆ ಹೊತ್ತು ತಂದಿದ್ದಾರೆ. ಅತ್ತೆಯ ಮೂರು ತಿಂಗಳ 1,500 ರೂ ಪಿಂಚಣಿ ಹಣವನ್ನ ಪಡೆಯಲು ಮಹಿಳೆ ಅತ್ತೆಯನ್ನ ಹೊತ್ತು ತಂದಿದ್ದಾರೆ, ಮಹಿಳೆಯ ಗ್ರಾಮಕ್ಕೆ ವಾಹನ ಸಂಪರ್ಕವಿಲ್ಲದ ಕಾರಣ ಮಹಿಳೆ ತನ್ನ ಅತ್ತೆಯನ್ನ ಮನೆಯಿಂದ 1.5 ಕಿಮೀ ದೂರದಲ್ಲಿರುವ ಹೊಳೆ ದಾಟಿ, ನಂತರ 9ಕಿಮೀ ಕಾಲ್ನಡಿಗೆಯಲ್ಲಿ ಬ್ಯಾಂಕ್ ತಲುಪಿದಿದ್ದಾರೆ,
ಕೆವೈಸಿಗಾಗಿ ಬ್ಯಾಂಕ್ ಪಟ್ಟು... ಆರ್‌ಬಿಐ ನಿಯಮ ಕಸದ ಬುಟ್ಟಿಗೆ...!
ಇನ್ನು ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆ ತನ್ನ ಅಳಲನ್ನ ತೋಡಿಕೊಂಡಿದ್ದು, " ಮೊದಲು ಬ್ಯಾಂಕ್ ಮಿತ್ರ ಯೋಜನೆಯಡಿ ಬ್ಯಾಂಕ್‌ನವರೆ ಮನೆಗೆ ಬಂದು ಪಿಂಚಣಿ ಕೊಡುತ್ತಿದ್ದರು, ಆದರೆ ಕಳೆದ 3 ತಿಂಗಳಿಂದ ಅವರು ಬರುತ್ತಿಲ್ಲ, ಈ ಕುರಿತು ಬ್ಯಾಂಕ್‌ನಲ್ಲಿ ವಿಚಾರಿಸಿದಾಗ, ಬ್ಯಾಂಕ್‌ನವರು ಫಿಂಗರ್ ಪ್ರಿಂಟ್ ಕೊಡಲು ಅತ್ತೆಯನ್ನ ಕರೆ ತರಲು ಹೇಳಿದರು, ಅದಕ್ಕೆ ಬೇರೆ ವಿಧಿಯಿಲ್ಲದೆ ಅತ್ತೆಯನ್ನ ಹೊತ್ತುಕೊಂಡು ಹೋಗುತ್ತಿದ್ದೇನೆ ಎಂದು ಮಹಿಳೆ ಹೇಳಿದ್ದಾರೆ.
ಇನ್ನು ಆರ್‌ಬಿಐ ನಿಯಮಗಳ ಬಗ್ಗೆ ನೋಡುವುದಾದರೆ, ವಯೋ ವೃದ್ದರು ಮತ್ತು ಅಶಕ್ತರ ಮನೆಗೆ ತೆರಳಿ ಬ್ಯಾಂಕ್‌ಗಳು ಪಿಂಚಣಿ ನೀಡಬೇಕು ಎಂಬ ನಿಯಮವಿದೆ, ಮನೆಗೆ ತೆರಳಿ ಅಲ್ಲೇ ಬೆರಳಚ್ಚು ಪಡೆಯಬೇಕು ಎಂದು ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚಿಸಿದೆ. ಆದರೆ ಈ ನಿಯಮಗಳು ಕಾಗದ ಮೇಲಿದ್ದು, ಅನೇಕ ಗ್ರಾಮೀಣ ಪ್ರದೇಶದಲ್ಲಿ ಈ ನಿಯಮಗಳು ಪಾಲನೆಯಾಗುತ್ತಿಲ್ಲ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ.