Search


ನೇಪಾಳದಲ್ಲಿ ಪ್ರವಾಹವಾಗಲೂ ಚೀನಾ ಕಾರಣ; ಭಾರತಕ್ಕೂ ಇದೆ ಆತಂಕ

ಕಠ್ಮಂಡು: ಟಿಬೆಟ್‌-ನೇಪಾಳ ಗಡಿಭಾಗದಲ್ಲಿ (Tibet-Nepal Border) ಸಂಭವಿಸಿದ ವಿನಾಶಕಾರಿ ಪ್ರವಾಹಕ್ಕೆ ಡ್ರ್ಯಾಗನ್‌ ಚೀನಾ ಕಾರಣ ಎಂಬ ವಿಶ್ಲೇಷಣೆಗಳು ಆರಂಭವಾಗಿವೆ. ನೀರಿನ ಹರಿವಿನ ಮಾಹಿತಿ ಹಂಚಿಕೊಳ್ಳದಿರುವುದೇ ಈ ವಿಧ್ವಂಸಕ್ಕೆ ಕಾರಣ ಎಂದು ತಜ್ಞರು ಜಾಗತಿಕ ಮಟ್ಟದಲ್ಲಿ ವಿಶ್ಲೇಷಿಸುತ್ತಿದ್ದು, ಮುಂದೆ ಭಾರತಕ್ಕೂ ಇಂತಹ ಪರಿಸ್ಥಿತಿ ಎದುರಾಗುವ ಸಾಧ್ಯತೆಗಳು ಹೆಚ್ಚಿವೆ. 

ಹಿಮಾಲಯದ ಹಿಮನದಿಗಳಲ್ಲಿ ಉಂಟಾಗುವ ಹಠಾತ್‌ ನೀರಿನ ಹೆಚ್ಚಳದ ಕುರಿತು ಮಾಹಿತಿ ಹಂಚಿಕೊಳ್ಳುವ ಕುರಿತು ಚೀನಾ ಮತ್ತು ನೇಪಾಳದ ಮಧ್ಯೆ ಒಪ್ಪಂದವಿದೆ. ಕಳೆದ ವರ್ಷ ಇದೇ ಸೂಕ್ಷ್ಮ ಪ್ರದೇಶದಲ್ಲಿ ದುರಂತ ಸಂಭವಿಸಿದ್ದಾಗ ಎರಡು ದೇಶಗಳು ಈ ಮಹತ್ವದ ಒಪ್ಪಂದ ಮಾಡಿಕೊಂಡಿದ್ದವು. ಈ ಒಪ್ಪಂದದ ಅನ್ವಯ ಎರಡು ದೇಶಗಳು ಗಡಿಯುದ್ದಕ್ಕೂ ಎರಡು ದೇಶಗಳು ನೀರಿನ ಹರಿವಿನ ನೈಜ ಸಮಯದ ಮಾಹಿತಿ ಹಂಚಿಕೊಳ್ಳುತ್ತವೆ, ಆದರೆ ಈ ಬಾರಿ ಭೀಕರ ಪ್ರವಾಹದ ವೇಳೆ ಮೇಲ್ಭಾಗದ ಟಿಬೆಟ್ ಭಾಗದಲ್ಲಿ ನದಿ ನೀರಿನ ಮಟ್ಟ ದಿಢೀರ್ ಹೆಚ್ಚಳವಾದ ಬಗ್ಗೆ ಅಥವಾ ಸಂಭವನೀಯ ಅಪಾಯದ ಕುರಿತು ಚೀನಾದ ಕಡೆಯಿಂದ ನೇಪಾಳಕ್ಕೆ ಸಕಾಲದಲ್ಲಿ ಯಾವುದೇ ಮುನ್ಸೂಚನೆ ಅಥವಾ ಎಚ್ಚರಿಕೆಯ ಸಂದೇಶಗಳು ರವಾನೆಯಾಗಿಲ್ಲ ಎಂದು ವರದಿಗಳು ತಿಳಿಸಿವೆ.

ಚೀನಾದಿಂದ ಸಕಾಲಕ್ಕೆ ಮಾಹಿತಿ ದೊರೆಯದ ಕಾರಣ ನೇಪಾಳದ ನದಿ ಪಾತ್ರದ ಗ್ರಾಮಗಳಿಗೆ ಪ್ರವಾಹ ಅಪ್ಪಳಿಸಿದ್ದು. ಪ್ರವಾಹದ ಭೀಕರತೆಯನ್ನ ಕಂಡ ನೇಪಾಳಿ ಜನ, ಅಲ್ಲಿಯ ಕಠ್ಮಂಡು ಪ್ರಧಾನ ಕಚೇರಿಗೆ ಮಾಹಿತಿ ರವಾನಿಸಿದ್ದಾರೆ. ಆದರೆ ಅಷ್ಟರೊಳಗೆ ಪರಿಸ್ಥಿತಿ ಕೈ ಮೀರಿತ್ತು ಎಂದು ತಿಳಿದು ಬಂದಿದೆ. ಇನ್ನು ನೇಪಾಳದ ರಾಷ್ಟ್ರೀಯ ವಿಪತ್ತು ಮತ್ತು ನಿರ್ವಹಣಾ ಪ್ರಾಧಿಕಾರದ ವರದಿಗಳ ಪ್ರಕಾರ, ಟಿಬೆಟ್‌ನ ಕೀರುಂಗ್ ಕಡೆಯಿಂದ ಭಾರಿ ಪ್ರಮಾಣದ ಪ್ರವಾಹ ನುಗ್ಗಿ ಬರುತ್ತಿರುವುದು ಚೀನಾಕ್ಕೆ ಮುಂಚಿತವಾಗಿ ತಿಳಿದಿತ್ತು. ಆದರೆ ಚೀನಾ ಅಧಿಕಾರಿಗಳು ನೇಪಾಳಕ್ಕೆ ಅಧಿಕೃತವಾಗಿ ಯಾವುದೇ ಮುನ್ಸೂಚನೆ ನೀಡಿರಲಿಲ್ಲ ಎಂದು ವರದಿಯಾಗಿದೆ.

ನೇಪಾಳದ ಪ್ರಮುಖ ಪತ್ರಕರ್ತರು ಚೀನಾದ ಈ ನಡೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ನೇಪಾಳವು ಯಾವಾಗಲೂ ತನ್ನ ನೆರೆಹೊರೆಯವರ ಭದ್ರತಾ ಹಿತಾಸಕ್ತಿಗಳನ್ನು ಗೌರವಿಸುತ್ತದೆ, ಆದರೆ ನಮ್ಮ ಉತ್ತರದ ನೆರೆಹೊರೆಯವರು (ಚೀನಾ) ಮುಂಚಿತವಾಗಿ ಎಚ್ಚರಿಕೆ ನೀಡದೆ ನಮಗೆ ಮೋಸ ಮಾಡಿದ್ದಾರೆ. ಇದು ನೇಪಾಳ-ಚೀನಾ ನಡುವಿನ ಕೇವಲ ‘ಏಕಮುಖ ಪ್ರೀತಿ’ (One-sided love)” ಎಂದು ಆಕ್ರೋಶ ಹೊರಹಾಕಿದ್ದಾರೆ

ಇನ್ನು ಈ ಅನಾಹುತವನ್ನ ನೆರೆಯ ದೇಶವಾದ ಭಾರತ ಯಾವ ರೀತಿ ಗಮನಿಸುತ್ತದೆ ಎಂಬುದು ಕುತೂಹಲ ಕೆರಳಿಸಿದೆ, ಭಾರತವು ಚೀನಾದ ದಕ್ಷಿಣ ಭಾಗದಲ್ಲಿದ್ದು, ಚೀನಾದಲ್ಲಿ ಹುಟ್ಟುವ ಬ್ರಹ್ಮಪುತ್ರ ನದಿ, ಭಾರತದ ಕಡೆಗೆ ಹರಿದು ಬರುತ್ತದೆ. ಇದೀಗ ಚೀನಾ ಈ ನದಿಗೆ ಅಡ್ಡಲಾಗಿ ಪ್ರಪಂಚದ ಅತಿದೊಡ್ಡ ಜಲಾಶಯ ನಿರ್ಮಿಸುತ್ತಿದ್ದು, ಸುಮಾರು 170 ಬಿಲಿಯನ್‌ ಹಣವನ್ನ ಈ ಯೋಜನೆಗೆ ಸುರಿದಿದೆ, ಅದರಲ್ಲೂ ಭೂಕಂಪನದ ಆತಂಕವಿರುವ ಪ್ರದೇಶದಲ್ಲಿ ಈ ಡ್ಯಾಂ ನಿರ್ಮಾಣಗೊಳ್ಳುತ್ತಿದ್ದು, ಮುಂದೊಂದು ದಿನ ಈ ಡ್ಯಾಂ ಒಡೆದರೆ ಅಥವಾ ಚೀನಾ ಉದ್ದೇಶಪೂರ್ವಕವಾಗಿ ನೀರಿನ ಹೊರ ಹರಿವಿನ ಬಗ್ಗೆ ಮಾಹಿತಿ ನೀಡದಿದ್ದರೆ, ಈಶಾನ್ಯ ಭಾರತದ ರಾಜ್ಯಗಳಲ್ಲೂ ಭೀಕರ ಪ್ರವಾಹ ಎದುರಾಗುವ ಸಾಧ್ಯತೆ ಇದೆ. 

By Ravikumar - 26-08-2026


Ads in Post