ನವದೆಹಲಿ: ಮುಂಬರುವ ದೀಪಾವಳಿ ಹಬ್ಬದವರೆಗೆ ಯಾವುದೇ ಪ್ರತಿಭಟನೆಗಳನ್ನು ಆಯೋಜಿಸುವುದಿಲ್ಲ ಎಂದು ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ ಘೋಷಿಸಿದ್ದಾರೆ. ಸಂಘಟನೆಯ ಕಾರ್ಯಕರ್ತರು ಮತ್ತು ಬೆಂಬಲಿಗರು ಹೋರಾಟಗಳಿಂದ ತಾತ್ಕಾಲಿಕ ವಿರಾಮ ಪಡೆದು, ಹಬ್ಬದ ದಿನಗಳನ್ನು ತಮ್ಮ ಕುಟುಂಬ ಹಾಗೂ ಪ್ರೀತಿಪಾತ್ರರೊಂದಿಗೆ ಕಳೆಯುವಂತೆ ಮನವಿ ಮಾಡಿದ್ದಾರೆ.
ಕಳೆದ ಕೆಲವು ದಿನಗಳಿಂದ ನಡೆದ ಘಟನೆಗಳಿಂದಾಗಿ ಕಾರ್ಯಕರ್ತರ ಕುಟುಂಬಗಳು ಆತಂಕಕ್ಕೊಳಗಾಗಿವೆ ಎಂದು ಅಭಿಜಿತ್ ದೀಪ್ಕೆ ತಿಳಿಸಿದ್ದಾರೆ. ತಮ್ಮ ಬೆಂಬಲಿಗರನ್ನು ‘ಕಾಕ್ರೋಚ್ಗಳು’ ಎಂದು ಸಂಬೋಧಿಸಿದ ಅವರು, ಇತ್ತೀಚಿನ ದಿನಗಳು ಸುಲಭವಾಗಿರಲಿಲ್ಲ. ಹೀಗಾಗಿ ಕೆಲ ದಿನಗಳ ಕಾಲ ಹೋರಾಟದಿಂದ ದೂರವಿದ್ದು, ಕುಟುಂಬದವರೊಂದಿಗೆ ಸಮಯ ಕಳೆಯುವಂತೆ ಕರೆ ನೀಡಿದ್ದಾರೆ.
ಇದೇ ವೇಳೆ, ಸಿಜೆಪಿ ಮುಖಂಡರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರ ಐದು ದಿನಗಳ ನ್ಯಾಯಾಂಗ ಬಂಧನ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಸೋಮವಾರ ಅವರನ್ನು ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (ಎಸ್ಇಎಂ) ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ ಅವರ ನ್ಯಾಯಾಂಗ ಬಂಧನವನ್ನು ಅಕ್ಟೋಬರ್ 21ರವರೆಗೆ ವಿಸ್ತರಿಸಲಾಗಿದೆ. ಹಲವು ಸ್ವಯಂಸೇವಕರ ಮೇಲೆ ಹಲ್ಲೆ ನಡೆಸಿ ವಶಕ್ಕೆ ಪಡೆದ ಬಳಿಕ ಕಿರುಕುಳ ನೀಡಲಾಗಿದೆ ಎಂದು ಅಭಿಜಿತ್ ದೀಪ್ಕೆ ಆರೋಪಿಸಿದ್ದಾರೆ.
ಜೈಲಿನಲ್ಲಿರುವ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರು ದೀಪಾವಳಿ ಹಬ್ಬವನ್ನು ಕುಟುಂಬದವರಿಂದ ದೂರವಿದ್ದು ಕಳೆಯಬೇಕಾಗಿದೆ. ಹೀಗಾಗಿ ಹಬ್ಬದ ಸಂಭ್ರಮದ ಸಂದರ್ಭದಲ್ಲಿ ಅವರನ್ನೂ ನೆನಪಿಸಿಕೊಳ್ಳುವಂತೆ ಅಭಿಜಿತ್ ದೀಪ್ಕೆ ಬೆಂಬಲಿಗರಲ್ಲಿ ಮನವಿ ಮಾಡಿದ್ದಾರೆ. ಹೋರಾಟದಲ್ಲಿ ಎಷ್ಟೇ ಕಷ್ಟಗಳು ಎದುರಾದರೂ ಅಹಿಂಸೆಯ ಮಾರ್ಗವನ್ನು ಕೈಬಿಡಬಾರದು ಮತ್ತು ಪ್ರಚೋದನೆಗಳಿಗೆ ಒಳಗಾಗಿ ದ್ವೇಷ ಹರಡಬಾರದು ಎಂದು ಅವರು ಕರೆ ನೀಡಿದ್ದಾರೆ.
ದ್ವೇಷದ ವಿರುದ್ಧ ಹೋರಾಡುವವರು ತಾವೇ ದ್ವೇಷದ ಮನಸ್ಥಿತಿಗೆ ಒಳಗಾಗಬಾರದು ಎಂದು ಎಚ್ಚರಿಸಿದ ಅಭಿಜಿತ್ ದೀಪ್ಕೆ, ಸೌರವ್ ಮತ್ತು ಅಶುತೋಷ್ ಜೈಲಿನಿಂದ ಬಿಡುಗಡೆಯಾಗಿ ಹೊರಬರುವಾಗ ‘ಇಂಕ್ವಿಲಾಬ್ ಜಿಂದಾಬಾದ್’ ಘೋಷಣೆ ಮೊಳಗಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅನ್ಯಾಯದ ಪರಿಸ್ಥಿತಿಯಲ್ಲಿಯೂ ಶಾಂತಿ ಮತ್ತು ಅಹಿಂಸೆಯ ಮಾರ್ಗವನ್ನು ಆಯ್ದುಕೊಳ್ಳುವ ಅವರ ಬದ್ಧತೆಯಿಂದ ಇತರರು ಪಾಠ ಕಲಿಯಬೇಕು ಎಂದು ತಿಳಿಸಿದ್ದಾರೆ.