ಬೀಜಿಂಗ್ : ಕಲ್ಲಿದ್ದಲು ಗಣಿಯಲ್ಲಿ ಅನಿಲ ಸ್ಪೋಟಗೊಂಡ 90 ಜನ ಸಾವನ್ನಪ್ಪಿರುವ ಘಟನೆ ಉತ್ತರ ಚೀನಾದ, ಶಾಂಕ್ಸಿ ಪ್ರಾಂತ್ಯದಲ್ಲಿ ನಡೆದಿದೆ. ಘಟನಾ ಸ್ಥಳದಲ್ಲಿ ಸಿಲುಕಿಕೊಂಡಿದ್ದ ಉಳಿದ 247 ಕಾರ್ಮಿಕರ ಪೈಕಿ 201 ಜನರನ್ನ ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ.
ಚೀನಾದ ಶಾಂಕ್ಸಿ ಪ್ರಾಂತ್ಯದ ಲಿಯುಶೆನ್ಯು ಕಲ್ಲಿದ್ದಲು ಗಣಿಯಲ್ಲಿ ಶುಕ್ರವಾರ ಸಂಜೆ ಭೀಕರ ಸ್ಪೋಟ ಸಂಭವಿಸಿತ್ತು. ಈ ಘಟನೆಯಲ್ಲಿ ಗಣಿಯೊಳಗೆ ಕೆಲಸ ಮಾಡುತ್ತಿದ್ದ 90 ಕಾರ್ಮಿಕರು ಅಸುನೀಗಿದ್ದಾರೆ. ಇನ್ನು ಘಟನೆಯಲ್ಲಿ ಗಣಿಯೊಳಗೆ ಸಿಲುಕಿಕೊಂಡಿದ್ದ 247 ಕಾರ್ಮಿಕರ ಪೈಕಿ ಶನಿವಾರ ಮುಂಜಾನೆಯ ಹೊತ್ತಿಗೆ 201 ಜನರನ್ನ ರಕ್ಷಿಸಲಾಗಿದೆ.
ಗಣಿಯ ಆಳದಲ್ಲಿ ಸಿಲುಕಿರುವ ಉಳಿದವರಿಗಾಗಿ ಶೋಧ ಕಾರ್ಯ ತೀವ್ರಗೊಂಡಿದೆ. ಘಟನೆ ಬೆನ್ನಲ್ಲೇ ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು, ಗಾಯಾಳುಗಳ ಚಿಕಿತ್ಸೆ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಯಾವುದೇ ಪ್ರಯತ್ನವನ್ನು ಬಿಡಬೇಡಿ ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಜೊತೆಗೆ, ಅಪಘಾತದ ಸಮಗ್ರ ತನಿಖೆ ನಡೆಸಿ ಜವಾಬ್ದಾರಿಯುತರನ್ನು ಹೊಣೆಗಾರರನ್ನಾಗಿ ಮಾಡಲು ಸೂಚಿಸಿದ್ದು, ಗಣಿ ಕಂಪನಿಯ ಪ್ರಮುಖ ಕಾರ್ಯನಿರ್ವಾಹಕರನ್ನು ಈಗಾಗಲೇ ಬಂಧಿಸಲಾಗಿದೆ.
ಚೀನಾದ ಒಟ್ಟು ರಾಷ್ಟ್ರೀಯ ಉತ್ಪಾದನೆಯ ಮೂರನೇ ಒಂದು ಭಾಗದಷ್ಟು (1.3 ಬಿಲಿಯನ್ ಟನ್) ಕಲ್ಲಿದ್ದಲನ್ನು ಉತ್ಪಾದಿಸುವ ಅತ್ಯಂತ ಪ್ರಮುಖ ಶಾಂಕ್ಸಿ ಪ್ರಾಂತ್ಯದಲ್ಲಿ ಈ ದುರಂತ ಸಂಭವಿಸಿದ್ದು, ಸ್ಫೋಟದ ನಿಖರ ಕಾರಣಕ್ಕಾಗಿ ತನಿಖೆ ಮುಂದುವರಿದಿದೆ.