Search


ಮೋದಿ ಸರ್ಕಾರದಿಂದ ಮೋಸವಾಗಿದೆ ಎಂದು ಮತ್ತೊಂದು ಮೆರವಣಿಗೆಗೆ ಕರೆ ಕೊಟ್ಟ ಕಾಕ್ರೋಚ್ ಪಾರ್ಟಿ

ನವದೆಹಲಿ, ಆಗಸ್ಟ್ 25: ಕೇಂದ್ರ ಸರ್ಕಾರ ಜುಲೈ 25ರಂದು ಯುವಕರು ಹಾಗೂ ಪ್ರತಿಭಟನಾಕಾರರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ ಎಂದು ಆರೋಪಿಸಿ Cockroach Janta Party (CJP) ಮತ್ತೊಂದು ಪ್ರತಿಭಟನಾ ಮೆರವಣಿಗೆಗೆ ಕರೆ ನೀಡಿದೆ. ಸೆಪ್ಟೆಂಬರ್ 5ರಂದು ನವದೆಹಲಿಯಲ್ಲಿ ಶಾಂತಿಯುತ ಪ್ರತಿಭಟನಾ ಮೆರವಣಿಗೆ ನಡೆಯಲಿದೆ ಎಂದು CJP ಘೋಷಿಸಿದೆ.

CJP ಘೋಷಿಸಿರುವಂತೆ, ಪ್ರತಿಭಟನಾ ಮೆರವಣಿಗೆ ಇಂಡಿಯಾ ಗೇಟ್‌ನಿಂದ ಆರಂಭವಾಗಿ ದೆಹಲಿ ಪೊಲೀಸ್‌ ಕೇಂದ್ರ ಕಚೇರಿವರೆಗೆ ಸಾಗಲಿದೆ. NEET ಸಂಬಂಧಿತ ಪ್ರಕರಣಗಳಲ್ಲಿ ಮೃತಪಟ್ಟ ವಿದ್ಯಾರ್ಥಿಗಳ ಕುಟುಂಬಸ್ಥರು ಹಾಗೂ ಜುಲೈ 20ರಂದು ನಡೆದ ಪ್ರತಿಭಟನೆಯ ವೇಳೆ ಪೊಲೀಸ್ ದೌರ್ಜನ್ಯಕ್ಕೆ ಒಳಗಾದವರು ಮೆರವಣಿಗೆಗೆ ನೇತೃತ್ವ ವಹಿಸಲಿದ್ದಾರೆ. ಅವರೊಂದಿಗೆ ವಿದ್ಯಾರ್ಥಿಗಳು ಹಾಗೂ ದೇಶದ ವಿವಿಧ ಭಾಗಗಳ ಯುವಕರು ಭಾಗವಹಿಸುವಂತೆ CJP ಕರೆ ನೀಡಿದೆ.

ಜುಲೈ 25ರಂದು ನಡೆದ ಪ್ರತಿಭಟನೆ ವೇಳೆ ಸರ್ಕಾರ ನೀಡಿದ ಭರವಸೆಗಳ ಹಿನ್ನೆಲೆಯಲ್ಲಿ CJP ತನ್ನ ರಾಷ್ಟ್ರವ್ಯಾಪಿ ಪ್ರತಿಭಟನಾ ಚಳವಳಿಯನ್ನು ಹಿಂಪಡೆದುಕೊಂಡಿತ್ತು. ಆದರೆ ಒಂದು ತಿಂಗಳು ಕಳೆದರೂ ಸರ್ಕಾರ ತನ್ನ ಭರವಸೆಗಳನ್ನು ಜಾರಿಗೆ ತರಲು ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ಸಂಘಟನೆ ಆರೋಪಿಸಿದೆ. ವಿಶೇಷವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಮತ್ತು ಯುವಕರ ವಿರುದ್ಧ ದಾಖಲಾಗಿರುವ FIRಗಳನ್ನು ಹಿಂಪಡೆಯುವ ಅಥವಾ ರದ್ದುಗೊಳಿಸುವ ವಿಚಾರ ಪ್ರಮುಖ ಬೇಡಿಕೆಯಾಗಿದೆ. CJP ಪ್ರಕಾರ, ಈ ಸಂಬಂಧ ಸರ್ಕಾರದಿಂದ ಇನ್ನೂ ಸ್ಪಷ್ಟ ಕ್ರಮ ಅಥವಾ ಬದ್ಧತೆ ವ್ಯಕ್ತವಾಗಿಲ್ಲ.

ಸುಪ್ರೀಂ ಕೋರ್ಟ್‌ ವಿಚಾರವೂ ಪ್ರಸ್ತಾಪ

ಆಗಸ್ಟ್ 18ರಂದು ಸುಪ್ರೀಂ ಕೋರ್ಟ್‌ ದೇಶಾದ್ಯಂತ ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ FIRಗಳ ಪಟ್ಟಿಯನ್ನು ನೀಡುವಂತೆ ಸರ್ಕಾರವನ್ನು ಕೇಳಿತ್ತು ಎಂದು CJP ಹೇಳಿದೆ. ಈ FIRಗಳನ್ನು ಒಟ್ಟಾಗಿ ಪರಿಗಣಿಸಿ ರದ್ದುಗೊಳಿಸುವ ಸಾಧ್ಯತೆಯ ಕುರಿತು ನ್ಯಾಯಾಲಯದ ಮುಂದೆ ವಿಚಾರ ನಡೆದಿದ್ದರೂ, ಸರ್ಕಾರದಿಂದ ಸ್ಪಷ್ಟ ಬದ್ಧತೆ ಸಿಕ್ಕಿಲ್ಲ ಎಂದು ಸಂಘಟನೆ ಆರೋಪಿಸಿದೆ.

ಜುಲೈ 25ರಂದು ಯುವಕರು ಸರ್ಕಾರದ ಭರವಸೆಗಳನ್ನು ನಂಬಿ ತಮ್ಮ ರಾಷ್ಟ್ರವ್ಯಾಪಿ ಚಳವಳಿಯನ್ನು ಹಿಂಪಡೆದಿದ್ದರು. ಆದರೆ ಇದೀಗ ಸರ್ಕಾರ ಭರವಸೆಗಳನ್ನು ಈಡೇರಿಸುವ ಬದಲು ವಿಳಂಬ ಮಾಡುತ್ತಿದೆ ಎಂದು CJP ಆರೋಪಿಸಿದೆ. ಸರ್ಕಾರದ ನಡೆ ಯುವಕರೊಂದಿಗೆ ‘ವಿಶ್ವಾಸಘಾತ’ ಮಾಡಿದಂತಾಗಿದೆ ಎಂದು ಹೇಳಿದ್ದು, ಇದೇ ಕಾರಣಕ್ಕೆ ಮತ್ತೆ ಬೀದಿಗಿಳಿಯುವ ಅನಿವಾರ್ಯತೆ ಎದುರಾಗಿದೆ ಎಂದು ತಿಳಿಸಿದೆ.

CJP ತನ್ನ ಮುಂದಿನ ಪ್ರತಿಭಟನೆಯನ್ನು ಶಾಂತಿಯುತವಾಗಿ ನಡೆಸುವುದಾಗಿ ತಿಳಿಸಿದ್ದು, ವಿದ್ಯಾರ್ಥಿಗಳು, ಯುವಕರು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದೆ. ಮೆರವಣಿಗೆಯ ಪ್ರಮುಖ ಸಂದೇಶವಾಗಿ ‘Keep Your Word’ ಎಂಬ ಘೋಷಣೆಯನ್ನು ಮುಂದಿಟ್ಟಿದೆ. ಇದರಿಂದ ಜುಲೈನಲ್ಲಿ ದೆಹಲಿಯಲ್ಲಿ ನಡೆದ ಯುವಕರ ಪ್ರತಿಭಟನಾ ಚಳವಳಿ ಮತ್ತೊಮ್ಮೆ ರಾಷ್ಟ್ರ ರಾಜಧಾನಿಯಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ.

By Ravikumar - 25-08-2026


Ads in Post