Search


ಜಿರಳೆ ಪಾರ್ಟಿ ದೇಶದ ಗೌರವವನ್ನ ಜಾಗತಿಕ ಮಟ್ಟದಲ್ಲಿ ಹಾಳು ಮಾಡುತ್ತಿದೆ: ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಆಕ್ರೋಶ

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರ ರಾಜೀನಾಮೆಗೆ ಒತ್ತಾಯಿಸಿ ದೇಶದೆಲ್ಲಡೆ ಕಾಕ್ರೋಚ್‌ ಪಾರ್ಟಿ ಅಭಿಯಾನ ನಡೆಸುತ್ತಿದ್ದು, ಇದೀಗ ಜಿರಳೆ ಪಾರ್ಟಿ ವಿರುದ್ದ ಸಚಿವ ಧರ್ಮೇಂದ್ರ ಪ್ರಧಾನ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜಿರಳೆ ಪಾರ್ಟಿ ದೇಶದ ಇಮೇಜ್‌ ಅನ್ನು ಅಂತರ್‌ ರಾಷ್ಟ್ರೀಯ ಮಟ್ಟದಲ್ಲಿ ಹಾಳು ಮಾಡುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಸುಪ್ರೀಂ ಮುಖ್ಯ ನ್ಯಾಯಾಧೀಶರ ಹೇಳಿಕೆಯಿಂದ ಹುಟ್ಟಿಕೊಂಡ ಕಾಕ್ರೋಚ್‌ ಜನತಾ ಪಾರ್ಟಿ, ಕಳೆದೊಂದು ತಿಂಗಳಿಂದ ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ದ ಹೋರಾಟ ನಡೆಸುತ್ತಿತ್ತು. ಈ ವೈಫಲ್ಯಕ್ಕೆ ನೈತಿಕ ಹೊಣೆ ಹೊತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿತ್ತು. ಈ ಆಂದೋಲನದ ಕುರಿತು ಇದೀಗ ಸಚಿವ ಪ್ರಧಾನ್‌ ತುಟಿ ಬಿಚ್ಚಿದ್ದಾರೆ. "ಸಿಜೆಪಿ ಸಂಘಟನೆಯು ಪ್ರಜಾಪ್ರಭುತ್ವ ಮಾದರಿಯಲ್ಲಿ ದೇಶದ ಜನರಿಂದ ತಿರಸ್ಕರಿಸಲ್ಪಟ್ಟಿರುವ ವಿಧ್ವಂಸಕ ಶಕ್ತಿಗಳ ಬಿ-ಟೀಮ್​ನಂತೆ ಕೆಲಸ ಮಾಡುತ್ತಿದೆ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ. 

ಚುನಾವಣೆಯಲ್ಲಿ ಸೋತ ಪಕ್ಷಗಳ ಬಿ-ಟೀಮ್‌ ಆಗಿದೆ ಸಿಜೆಪಿ..!

ದೇಶದ ಪ್ರಜಾಪ್ರಭುತ್ವ ಮತ್ತು ಅಭಿವೃದ್ಧಿ ಕಾರ್ಯಸೂಚಿಯನ್ನು ಒಪ್ಪದ, ಚುನಾವಣೆಯಲ್ಲಿ ಜನರಿಂದ ತಿರಸ್ಕೃತಗೊಂಡಿರುವ ಕೆಲವು ಶಕ್ತಿಗಳ ಪರವಾಗಿ ಸಿಜೆಪಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿದೆ. ಇದು ದೇಶದ ಇಮೇಜ್ ಅನ್ನು ಜಾಗತಿಕ ಮಟ್ಟದಲ್ಲಿ ಹಾಳುಮಾಡಲು ಮತ್ತು ಸಮಾಜದಲ್ಲಿ ಗೊಂದಲ ಮೂಡಿಸಲು ನಿರಂತರವಾಗಿ ಯತ್ನಿಸುತ್ತಿದೆ. ಪ್ರಜಾಪ್ರಭುತ್ವದ ಮಾರ್ಗದಲ್ಲಿ ಸೋತವರು ಈಗ ಇಂತಹ ಸಂಘಟನೆಗಳ ಮೂಲಕ ದೇಶದ ಪ್ರಗತಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಸಚಿವ ಧರ್ಮೇಂದ್ರ ಪ್ರಧಾನ್ ಆರೋಪಿಸಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ದೇಶದ ಜನರಿಂದ ತಿರಸ್ಕೃತಗೊಂಡವರು ಈಗ ವೇಷ ಮರೆಸಿಕೊಂಡು ಬಂದು ನಮ್ಮ ವ್ಯವಸ್ಥೆಯ ಬೆನ್ನು ಬಿದ್ದಿದ್ದಾರೆ. ದೇಶವನ್ನು ವಿಭಜಿಸಲು ಬಯಸುವವರ ಪರವಾಗಿ ಇವರು ಘೋಷಣೆಗಳನ್ನು ಕೂಗುತ್ತಾರೆ. ಇಂತಹವರನ್ನು ಈಗ ಗುರುತಿಸಲಾಗಿದೆ. ಕೆಲವು ಜನರಿಗೆ ದೇಶದ ಪ್ರಗತಿಯ ಮೇಲೆ ನಂಬಿಕೆಯಿಲ್ಲ ಎಂದು ಹಿರಿಯ ಬಿಜೆಪಿ ನಾಯಕರಾದ ಧರ್ಮೇಂದ್ರ ಪ್ರಧಾನ್ ಟೀಕಿಸಿದ್ದಾರೆ.

By Ravikumar - 23-06-2026


Ads in Post