ಬೆಂಗಳೂರು: ನಟ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾವನ್ನು ಕಾಂಡೋಮ್ ಜಾಹೀರಾತಿಗೆ ಹೋಲಿಕೆ ಮಾಡಿ ಟೀಕಿಸಿದ್ದವರಿಗೆ ಇದೀಗ ಯಶ್ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ. ತಮ್ಮ ಮುಂದಿನ ಬಹುನಿರೀಕ್ಷಿತ ಚಿತ್ರ ‘ರಾಮಾಯಣ’ವನ್ನು ಕುಟುಂಬದವರೆಲ್ಲರೂ, ಅದರಲ್ಲೂ ಮಕ್ಕಳು ಕೂಡ ಕುಳಿತು ನೋಡಬಹುದಾದ ಸಿನಿಮಾವೆಂದು ಹೇಳುವ ಮೂಲಕ ಟೀಕಾಕಾರರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಬಹುನಿರೀಕ್ಷಿತ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಯಶ್, ಭಾರತೀಯ ಚಿತ್ರರಂಗ ಜಾಗತಿಕ ಮಟ್ಟದಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಾದರೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಹೇಳಿದರು. ಪ್ರಾದೇಶಿಕ ಭೇದಭಾವಗಳನ್ನು ಬದಿಗಿಟ್ಟು, ಉತ್ತಮ ಸಿನಿಮಾಗಳನ್ನು ಬೆಂಬಲಿಸುವ ಮೂಲಕ ಭಾರತೀಯ ಚಿತ್ರರಂಗವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು ಎಂಬ ಸಂದೇಶವನ್ನೂ ನೀಡಿದರು.
‘ಮನೆಮಂದಿಯೆಲ್ಲಾ ಕುಳಿತು ನೋಡುವ ಸಿನಿಮಾ’
‘ಎಲ್ಲ ಕನ್ನಡಿಗರಲ್ಲಿ ನಾನು ಒಂದು ಮನವಿ ಮಾಡಿಕೊಳ್ಳುತ್ತೇನೆ. ಯಾರು ಏನೇ ಮಾತನಾಡಲಿ, ಈ ಸಿನಿಮಾ ಮನೆಮಂದಿಯೆಲ್ಲಾ, ಮಕ್ಕಳೊಂದಿಗೆ ಕುಳಿತು ನೋಡುವಂತಹ ಸಿನಿಮಾ. ಯಾವ ಸಿನಿಮಾ, ಯಾರಿಗಾಗಿ ಮಾಡಬೇಕು ಎಂಬುದು ನಮಗೆ ಗೊತ್ತಿರುತ್ತದೆ’ ಎಂದು ಯಶ್ ಹೇಳಿದರು. ಈ ಮೂಲಕ ತಮ್ಮ ಸಿನಿಮಾಗಳ ಬಗ್ಗೆ ವ್ಯಕ್ತವಾಗುತ್ತಿರುವ ಟೀಕೆಗಳಿಗೆ ಪರೋಕ್ಷವಾಗಿ ಉತ್ತರ ನೀಡಿದರು.
ಭಾರತೀಯ ಚಿತ್ರರಂಗದಲ್ಲಿ ಹೊಸ ಪ್ರಯತ್ನಗಳು ನಡೆಯಬೇಕಾದರೆ ಸೋಲು-ಗೆಲುವಿನ ಲೆಕ್ಕಾಚಾರ ಮೀರಿ ಮುನ್ನಡೆಯಬೇಕು ಎಂದು ಅಭಿಪ್ರಾಯಪಟ್ಟ ಅವರು, ಕೆಲವೊಮ್ಮೆ ಗಡಿಗಳನ್ನು ದಾಟಿ ಸವಾಲುಗಳನ್ನು ಸ್ವೀಕರಿಸಿದಾಗಲೇ ಇತಿಹಾಸದಲ್ಲಿ ಮೈಲಿಗಲ್ಲುಗಳನ್ನು ನಿರ್ಮಿಸಲು ಸಾಧ್ಯವಾಗುತ್ತದೆ ಎಂದರು. ಇಂದು ನಾವು ಹಾಕುವ ಹೆಜ್ಜೆಗಳು ಮುಂದಿನ ಪೀಳಿಗೆಗೆ ದಾರಿಯಾಗಬಹುದು. ಹೀಗಾಗಿ ಇಂತಹ ಪ್ರಯತ್ನಗಳಿಗೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾಗಳ ಬಗ್ಗೆ ನಡೆಯುವ ಟೀಕೆಗಳ ಕುರಿತು ಮಾತನಾಡಿದ ಯಶ್, ವಿಎಫ್ಎಕ್ಸ್, ನಟರ ಅಭಿನಯ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಟೀಕೆಗಳು ಹಿಂದಿನಿಂದಲೂ ನಡೆಯುತ್ತಿವೆ ಎಂದರು. ಬ್ರಿಟಿಷರು ಅನುಸರಿಸಿದ್ದ ‘ಡಿವೈಡ್ ಆ್ಯಂಡ್ ರೂಲ್’ ನೀತಿಯನ್ನು ಉಲ್ಲೇಖಿಸಿದ ಅವರು, ನಮ್ಮೊಳಗೇ ಭಿನ್ನಾಭಿಪ್ರಾಯಗಳನ್ನು ಬೆಳೆಸಿಕೊಂಡು ಕುಳಿತರೆ ಜಾಗತಿಕ ಮಟ್ಟದಲ್ಲಿ ಇತರರಿಗೆ ಸವಾಲೊಡ್ಡಲು ಸಾಧ್ಯವಿಲ್ಲ. ಭಾರತೀಯ ಚಿತ್ರರಂಗದ ಸಾಧನೆಗಳನ್ನು ಗುರುತಿಸಿ, ಕಲೆಯನ್ನು ಅರ್ಥಮಾಡಿಕೊಂಡು ಪರಸ್ಪರ ಬೆಂಬಲಿಸುವ ಅಗತ್ಯವಿದೆ ಎಂದು ಹೇಳಿದರು.
ಈ ಹಿಂದೆ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಬಗ್ಗೆ ನಟಿ ರಿಷಿಕಾ ಸಿಂಗ್, ಬಾಲಿವುಡ್ ವಿಮರ್ಶಕ ಕಮಾಲ್ ಆರ್ ಖಾನ್ ಸೇರಿದಂತೆ ಹಲವರು ಟೀಕೆಗಳನ್ನು ವ್ಯಕ್ತಪಡಿಸಿದ್ದರು. ಇದೀಗ ‘ರಾಮಾಯಣ’ ಚಿತ್ರದ ಕಾರ್ಯಕ್ರಮದಲ್ಲಿ ಯಶ್ ನೀಡಿರುವ ಹೇಳಿಕೆಗಳು ಗಮನ ಸೆಳೆದಿವೆ. ನಿರ್ದೇಶಕ ನಿತೇಶ್ ತಿವಾರಿ ಅವರ ಸಾರಥ್ಯದಲ್ಲಿ ಹಾಗೂ ನಮಿತ್ ಮಲ್ಹೋತ್ರಾ ನಿರ್ಮಾಣದಲ್ಲಿ ಮೂಡಿಬರುತ್ತಿರುವ ‘ರಾಮಾಯಣ’ ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತ ನೀಡುತ್ತಿದ್ದಾರೆ. ಚಿತ್ರದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ಯಶ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.