Search


VVIPಗಳಿಂದ ಸ್ಕೂಲ್‌ ಮಕ್ಕಳವರೆಗೆ: ಡಿಕೆ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಗಮಿಸುವ ಅಥಿತಿಗಳ ಸಂಪೂರ್ಣ ವಿವರ..!

ಬೆಂಗಳೂರು: ಡಿಕೆ ಶಿವಕುಮಾರ್‌ ಪದಗ್ರಹಣ ಕಾರ್ಯಕ್ರಮಕ್ಕೆ ಬೆಂಗಳೂರು ಸಜ್ಜಾಗುತ್ತಿದೆ. ಇಡೀ ದೇಶದ ಗಮನ ಬೆಂಗಳೂರಿನ ಮೇಲೆ ಕೇಂದ್ರಿಕೃತವಾಗಿದ್ದು. ಈ ಐತಿಹಾಸಿಕ ಸಮಾರಂಭಕ್ಕೆ ಯಾರೆಲ್ಲಾ ವಿವಿಐಪಿಗಳು ಆಗಮಿಸುತ್ತಾರೆ ಎಂಬ ಕುರಿತು ಮಾಹಿತಿ ಹೊರಬಿದ್ದಿದೆ. ಜನ ಸಾಮಾನ್ಯರನ್ನು ಒಳಗೊಂಡಂತೆ ರಾಜಕೀಯ ದೈತ್ಯರ ಜೊತೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಈ ಸಮಾರಂಭದಲ್ಲಿ ಭಾಗವಹಿಸಲು ವಿಶೇಷ ಆಹ್ವಾನ ನೀಡಲಾಗಿದೆ.

ಪದಗ್ರಹಣ ಸಮಾರಂಭಕ್ಕೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಸೇರಿದಂತೆ ಕಾಂಗ್ರೆಸ್ ಹೈಕಮಾಂಡ್‌ನ ಪ್ರಮುಖ ನಾಯಕರು ಸಾಕ್ಷಿಯಾಗಲಿದ್ದಾರೆ. ಇವರೊಂದಿಗೆ ದೇಶದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ವಿವಿಧ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರುಗಳು (PCC Presidents) ಮತ್ತು ಪ್ರಮುಖ ಸಂಸದರು ಪಾಲ್ಗೊಳ್ಳಲಿದ್ದಾರೆ. ಸಮಾರಂಭಕ್ಕೆ ಮಂಗಳಕರ ಚಾಲನೆ ನೀಡಲು ಸರ್ವಧರ್ಮ ಗುರುಗಳನ್ನು ಆಹ್ವಾನಿಸಲಾಗಿದ್ದು, ಹಿಂಧೂ, ಮುಸ್ಲಿಂ, ಕ್ರೈಸ್ಥ ಮತಗಳ ಧರ್ಮ ಗುರುಗಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.

ತವರೂರಿನ ಶಾಲಾ ಮಕ್ಕಳಿಗೂ ವಿಶೇಷ ಆಹ್ವಾನ...!

ಡಿ.ಕೆ. ಶಿವಕುಮಾರ್ ಅವರ ತವರೂರಾದ ಕನಕಪುರದ ದೊಡ್ಡಾಲಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ವಿಶೇಷ ಆಹ್ವಾನ ನೀಡಲಾಗಿದೆ. ಅವರೊಂದಿಗೆ ಸಮಾಜದ ಬೆನ್ನೆಲುಬಾಗಿರುವ ಕೂಲಿ ಕಾರ್ಮಿಕರು, ಪೌರ ಕಾರ್ಮಿಕರು, ರೈತ ಮುಖಂಡರು, ದಲಿತ ಸಂಘಟನೆಗಳ ನಾಯಕರು, ಹಿಂದುಳಿದ ವರ್ಗಗಳ ಮುಖಂಡರು, ಸ್ತ್ರೀ ಶಕ್ತಿ ಸಂಘಗಳ ಪ್ರತಿನಿಧಿಗಳು ಹಾಗೂ ಮಹಿಳಾ ಮುಖಂಡರನ್ನು ಅತ್ಯಂತ ಗೌರವದಿಂದ ಆಹ್ವಾನಿಸಲಾಗಿದೆ.

ಕೇವಲ ರಾಜಕೀಯಕ್ಕಷ್ಟೇ ಸೀಮಿತವಾಗದೆ ಮಾಧ್ಯಮ ಕ್ಷೇತ್ರ, ಚಿತ್ರರಂಗ, ನ್ಯಾಯಾಂಗ, ಕ್ರೀಡಾಕ್ಷೇತ್ರ, ನಾಟಕ ರಂಗದ ದಿಗ್ಗಜರು, ಪ್ರಮುಖ ಸಾಹಿತಿಗಳು ಹಾಗೂ ಕಲಾವಿದರು ಈ ಸಮಾರಂಭಕ್ಕೆ ಬರಲಿದ್ದಾರೆ. ಆರ್ಥಿಕ ವಲಯದಿಂದ ಪ್ರಮುಖ ಕೈಗರಿಕೋದ್ಯಮಿಗಳು, ವಾಣಿಜ್ಯೋದ್ಯಮಿಗಳು, ಹೋಟೆಲ್ ಉದ್ಯಮಿಗಳು ಹಾಗೂ ದೇಶದ ಭವಿಷ್ಯವಾಗಿರುವ ಯುವ ಮುಖಂಡರಿಗೆ ಸಾಕ್ಷಿಯಾಗಲು ವೇದಿಕೆ ಸಜ್ಜಾಗಿದೆ. ಒಟ್ಟಾರೆಯಾಗಿ ರಾಜಕೀಯ ಗಣ್ಯರು ಮತ್ತು ಜನಸಾಮಾನ್ಯರ ಅಪೂರ್ವ ಸಂಗಮಕ್ಕೆ ಈ ಪ್ರಮಾಣ ವಚನ ಕಾರ್ಯಕ್ರಮ ಸಾಕ್ಷಿಯಾಗಲಿದೆ.

By Ravikumar - 02-06-2026


Ads in Post