ನವದೆಹಲಿ: ಸೂಪರ್ಸ್ಟಾರ್ ರಜನಿಕಾಂತ್ ಅವರ ಅಪ್ಪಟ ಅಭಿಮಾನಿಯಾಗಿರುವ ಭಾರತೀಯ ಕ್ರಿಕೆಟಿಗ ಸಂಜು ಸ್ಯಾಮ್ಸನ್, ಅವರ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಜೈಲರ್ 2’ ವೀಕ್ಷಿಸಲು ಇಡೀ ಚಿತ್ರಮಂದಿರವನ್ನೇ ಬುಕ್ ಮಾಡಿದ್ದಾರೆ. ತಮ್ಮ ನೆಚ್ಚಿನ ನಟನ ಸಿನಿಮಾವನ್ನು ದೊಡ್ಡ ಪರದೆಯಲ್ಲಿ ಕಣ್ತುಂಬಿಕೊಳ್ಳಲು ಸಜ್ಜಾಗಿರುವ ಸಂಜು, ಈ ವಿಶೇಷ ಪ್ರದರ್ಶನಕ್ಕೆ ತಮ್ಮ ಕುಟುಂಬದ ಸದಸ್ಯರು, ಸ್ನೇಹಿತರು ಹಾಗೂ ತಂಡದ ಸಹ ಆಟಗಾರರನ್ನು ಆಹ್ವಾನಿಸಿದ್ದಾರೆ.
ರಜನಿಕಾಂತ್ ಅವರ ಸಿನಿಮಾಗಳನ್ನು ವೀಕ್ಷಿಸುವುದೆಂದರೆ ತಮಗೆ ತುಂಬಾ ಇಷ್ಟ ಎಂದು ಹೇಳಿರುವ ಸಂಜು ಸ್ಯಾಮ್ಸನ್, ಅವರ ಮುಂದಿನ ಚಿತ್ರಕ್ಕಾಗಿ ಯಾವಾಗಲೂ ಕಾಯುತ್ತಿರುತ್ತೇನೆ ಎಂದು ತಿಳಿಸಿದ್ದಾರೆ. ಈ ಬಾರಿ ಇಡೀ ಚಿತ್ರಮಂದಿರವನ್ನು ಬುಕ್ ಮಾಡುವ ಅವಕಾಶ ಸಿಕ್ಕಿರುವುದು ಸಂತೋಷ ತಂದಿದೆ. ತಮ್ಮ ಸ್ನೇಹಿತರನ್ನು ಆಹ್ವಾನಿಸಿದ್ದು, ತಮಿಳು ಭಾಷೆ ತಿಳಿದಿರುವ ತಂಡದ ಸಹ ಆಟಗಾರರೂ ಸಿನಿಮಾ ವೀಕ್ಷಣೆಗೆ ಬರುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ. ದೊಡ್ಡ ಪರದೆಯಲ್ಲಿ ರಜನಿಕಾಂತ್ ಅವರನ್ನು ನೋಡುವ ಅನುಭವ ರೋಮಾಂಚನಕಾರಿಯಾಗಿರಲಿದೆ ಎಂದೂ ಸಂಜು ಅಭಿಪ್ರಾಯಪಟ್ಟಿದ್ದಾರೆ.
ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಜೈಲರ್ 2’, 2023ರಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿದ್ದ ‘ಜೈಲರ್’ ಚಿತ್ರದ ಮುಂದುವರಿದ ಭಾಗವಾಗಿದೆ. ಈ ಆಕ್ಷನ್-ಥ್ರಿಲ್ಲರ್ ಸಿನಿಮಾದಲ್ಲಿ ರಜನಿಕಾಂತ್ ಅವರು ಮತ್ತೊಮ್ಮೆ ನಿವೃತ್ತ ಪೊಲೀಸ್ ಅಧಿಕಾರಿ ಟೈಗರ್ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿದ್ದು, ಸಂಜು ಸ್ಯಾಮ್ಸನ್ ಅವರ ಈ ವಿಶೇಷ ಸಿನಿಮಾ ವೀಕ್ಷಣೆಯೂ ಗಮನ ಸೆಳೆದಿದೆ.