Search


ಉಜ್ವಲ ಯೋಜನೆಗೂ ಕತ್ತರಿ : 9 ರಿಂದ 4 ಸಿಲಿಂಡರ್‌ಗೆ ಇಳಿಸಿದ ಕೇಂದ್ರ ಸರ್ಕಾರ...!

ನವದೆಹಲಿ: ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಅಡಿ ವಾರ್ಷಿಕವಾಗಿ ನೀಡುತ್ತಿದ್ದ  LPG ಸಿಲಿಂಡರ್‌ಗಳ ಸಬ್ಸಿಡಿಯನ್ನ 9 ಸಿಲಿಂಡರ್‌ನಿಂದ 4ಕ್ಕೆ ಇಳಿಕೆ ಮಾಡಿ ಆದೇಶ ಹೊರಡಿಸಿದೆ. ಈ ನಿಯಮದನ್ವಯ ಇನ್ನು ಮುಂದೆ ಉಜ್ವಲ ಯೋಜನೆಯ ಫಲಾನುಭವಿಗಳು ವರ್ಷಕ್ಕೆ 4 ಸಿಲಿಂಡರ್‌ಗಳ ಮೇಲಿನ ಸಬ್ಸಿಡಿಯನ್ನ ಮಾತ್ರ ಪಡೆಯಬಹುದಾಗಿದೆ. ಈ ಯೋಜನೆಯಡಿ ದೇಶದಲ್ಲಿ 10.60 ಕೋಟಿ ಎಲ್‌ಪಿಜಿ ಸಂಪರ್ಕಗಳನ್ನು ನೀಡಲಾಗಿದೆ ಮತ್ತು ಇಲ್ಲಿಯವರೆಗೆ ಅವರಿಗೆ ವರ್ಷಕ್ಕೆ ಒಂಬತ್ತು ಸಿಲಿಂಡರ್‌ಗಳನ್ನು ನೀಡಲಾಗಿದೆ.

ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಅಂತಾರಾಷ್ಟ್ರೀಯ ಸಂಘರ್ಷ ಹಾಗೂ ಹಾರ್ಮುಜ್ ಜಲಸಂಧಿಯ ಮಾರ್ಗದಲ್ಲಿ ಎದುರಾಗಿರುವ ಸವಾಲುಗಳ ಕಾರಣವನ್ನಿಟ್ಟುಕೊಂಡು ಕೇಂದ್ರ ಸರ್ಕಾರ ಇಂತಹ ಕ್ರಮಕ್ಕೆ ಮುಂದಾಗಿದ್ದು, ಇದರಿಂದಾಗಿ ಬಡ ಕುಟುಂಬಗಳ ಮೇಲಿನ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ. ದೇಶದಲ್ಲಿ ಇಂಧನ ಭದ್ರತೆಯನ್ನ ಕಾಪಾಡಿಕೊಳ್ಳಲು ಇಂತಹ ಕ್ರಮ ಅನಿವಾರ್ಯವೆಂದು ಬಿಜೆಪಿ ನಾಯಕರು ಸಮರ್ಥನೆ ಮಾಡಿಕೊಂಡಿದ್ದಾರೆ.

ಸರಾಸರಿ ಮನೆಯ ಬಳಕೆಯನ್ನು ಗಮನದಲ್ಲಿಟ್ಟುಕೊಂಡು ಈ ಬದಲಾವಣೆ ಮಾಡಲಾಗಿದೆ ಎಂದು ಹೇಳಲಾಗಿದೆ. 2016 ರಲ್ಲಿ ಪ್ರಾರಂಭವಾದ ಈ ಯೋಜನೆಯಡಿಯಲ್ಲಿ, ಫಲಾನುಭವಿಗಳು ಆರಂಭದಲ್ಲಿ ವರ್ಷಕ್ಕೆ ತಲಾ 14.2 ಕಿಲೋಗ್ರಾಂಗಳಷ್ಟು 12 ಸಬ್ಸಿಡಿ ಸಿಲಿಂಡರ್‌ಗಳನ್ನು ಪಡೆದರು. ಆದಾಗ್ಯೂ, ಕಳೆದ ವರ್ಷ ಸಬ್ಸಿಡಿ ಸಿಲಿಂಡರ್‌ಗಳ ಸಂಖ್ಯೆಯನ್ನು ಒಂಬತ್ತಕ್ಕೆ ಇಳಿಸಲಾಯಿತು, ಮತ್ತು ಈಗ ಅದನ್ನು ನಾಲ್ಕಕ್ಕೆ ಇಳಿಸಲಾಗಿದೆ.

ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಸಿಗುವ ವಿಶೇಷ 300 ರೂ. ಸಬ್ಸಿಡಿಯಿಂದಾಗಿ, ಅವರು ಮೊದಲ 4 ಸಿಲಿಂಡರ್‌ಗಳನ್ನು ಕೇವಲ 642 ರೂ. ಅತ್ಯಂತ ಕಡಿಮೆ ದರದಲ್ಲಿ ಪಡೆಯಲಿದ್ದಾರೆ. ಉಳಿದ ಸಿಲಿಂಡರ್‌ಗಳು ಅವರಿಗೆ 942 ರೂ. ಸಾಮಾನ್ಯ ಸಬ್ಸಿಡಿ ದರದಲ್ಲೇ ಲಭ್ಯವಿರುತ್ತವೆ.

By Ravikumar - 09-06-2026


Ads in Post