ರಾಮನಗರ: ರಾಮನಗರದಲ್ಲಿ ನಡೆದ ಕರಗ ಮಹೋತ್ಸವದಲ್ಲಿ ನಟ ದರ್ಶನ್ ಅಭಿಮಾನಿಗಳು ನಿರಂತರವಾಗಿ ‘ಡಿ ಬಾಸ್, ಡಿ ಬಾಸ್’ ಎಂದು ಘೋಷಣೆ ಕೂಗಿದ ಘಟನೆ ನಡೆದಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಷಣ ಆರಂಭಿಸಲು ಮುಂದಾದ ವೇಳೆ ಅಭಿಮಾನಿಗಳ ಘೋಷಣೆ ಜೋರಾಗಿದ್ದರಿಂದ ಕೆಲಕಾಲ ಕಾರ್ಯಕ್ರಮದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಸಿಎಂ ಮೈಕ್ ಹಿಡಿದು ಮಾತನಾಡಲು ಆರಂಭಿಸುತ್ತಿದ್ದಂತೆ ದರ್ಶನ್ ಅಭಿಮಾನಿಗಳ ಘೋಷಣೆ ಮತ್ತಷ್ಟು ಜೋರಾಯಿತು. ಇದರಿಂದ ಶಿವಕುಮಾರ್ ಕೆಲ ಹೊತ್ತು ಭಾಷಣ ನಿಲ್ಲಿಸಿ ಅಭಿಮಾನಿಗಳನ್ನು ಶಾಂತಗೊಳಿಸುವಂತೆ ಮನವಿ ಮಾಡಿದರು. ವೇದಿಕೆಯಲ್ಲಿದ್ದವರು ಕೂಡ ಘೋಷಣೆಗಳನ್ನು ನಿಲ್ಲಿಸುವಂತೆ ಮನವಿ ಮಾಡಿದರು.
ಈ ವೇಳೆ ಅಭಿಮಾನಿಗಳಿಗೆ ಮಾತನಾಡಿದ ಡಿಕೆ ಶಿವಕುಮಾರ್, ಇದು ಪವಿತ್ರವಾದ ಸಭೆಯಾಗಿದ್ದು, ಅಭಿಮಾನಕ್ಕೆ ತಾವು ಗೌರವ ನೀಡುವುದಾಗಿ ಹೇಳಿದರು. ಆದರೆ ಕೋರ್ಟ್ ವಿಚಾರವನ್ನು ಮುಂದಿಟ್ಟುಕೊಂಡು ತಮ್ಮ ಮೇಲೆ ಒತ್ತಡ ಹೇರಬಾರದು ಎಂದು ಮನವಿ ಮಾಡಿದರು. “ನಿಮ್ಮ ಭಾವನೆ ನನಗೆ ಗೊತ್ತಿದೆ. ನಾನು ಇಲ್ಲಿ ನಿಮ್ಮ ಸೇವಕನಾಗಿ ಬಂದಿದ್ದೇನೆ. ನಾನು ಸಿಎಂ ಆಗಿರಬಹುದು, ಆದರೆ ರಾಮನಗರ ಜಿಲ್ಲೆಯ ಮಗ” ಎಂದು ಶಿವಕುಮಾರ್ ಹೇಳಿದರು.
ದರ್ಶನ್ ಅಭಿಮಾನಿಗಳಿಗೆ ಕಾನೂನು ಚೌಕಟ್ಟಿನಲ್ಲೇ ಎಲ್ಲವೂ ನಡೆಯಬೇಕು ಎಂದು ತಿಳಿಸಿದ ಅವರು, ದೇವರಲ್ಲಿ ಪ್ರಾರ್ಥನೆ ಮಾಡುವಂತೆ ಅಭಿಮಾನಿಗಳಿಗೂ ಮನವಿ ಮಾಡಿದರು. “ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗಲ್ಲ. ನೀವು ಕೂಡ ಚಾಮುಂಡಿಗೆ ಪ್ರಾರ್ಥನೆ ಮಾಡಿ, ತಾಯಿ ಒಳ್ಳೆಯದು ಮಾಡ್ತಾಳೆ” ಎಂದು ಹೇಳಿದರು. ಘೋಷಣೆಗಳ ನಡುವೆಯೇ ಕೆಲಕಾಲ ಭಾಷಣಕ್ಕೆ ಅಡ್ಡಿಯಾಗಿದ್ದರೂ, ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಬಳಿಕ ಮುಖ್ಯಮಂತ್ರಿ ತಮ್ಮ ಭಾಷಣವನ್ನು ಮುಂದುವರಿಸಿದರು. ಕಾರ್ಯಕ್ರಮದಲ್ಲಿ ಪಟಾಕಿ ಸಿಡಿಸದಂತೆಯೂ ಅಭಿಮಾನಿಗಳಿಗೆ ಮನವಿ ಮಾಡಲಾಯಿತು.