ನೇಪಾಳ–ಟಿಬೆಟ್ ಗಡಿಯಲ್ಲಿ ಸಂಭವಿಸಿದ ಭೀಕರ ಫ್ಲ್ಯಾಶ್ ಫ್ಲಡ್ ಹಾಗೂ ಭೂಕುಸಿತದಿಂದ 392 ಮಂದಿ ಮೃತಪಟ್ಟಿದ್ದು, 1,468 ಮಂದಿ ನಾಪತ್ತೆಯಾಗಿದ್ದಾರೆ. ಮೃತರಲ್ಲಿ 389 ಮಂದಿ ನೇಪಾಳದಲ್ಲಿ ಹಾಗೂ 3 ಮಂದಿ ಟಿಬೆಟ್ನಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಈ ದುರಂತಕ್ಕೆ ಸಾಮಾನ್ಯ ಭೂಕಂಪಕ್ಕಿಂತ ಹಿಮನದಿ ಕುಸಿತದಿಂದ ಉಂಟಾದ ಐಸ್–ರಾಕ್ ಅವಲಾಂಚ್ ಮತ್ತು ಡೆಬ್ರಿಸ್ ಫ್ಲೋ ಪ್ರಮುಖ ಕಾರಣ ಎಂದು ಪ್ರಾಥಮಿಕ ವಿಶ್ಲೇಷಣೆಗಳು ಸೂಚಿಸಿವೆ. ಭಾರೀ ಪ್ರಮಾಣದ ನೀರು, ಕೆಸರು, ಬಂಡೆಗಳು ಮತ್ತು ಹಿಮ ಒಮ್ಮೆಲೆ ಕೆಳಭಾಗಕ್ಕೆ ಹರಿದು ಬಂದು ಹಲವು ಗ್ರಾಮಗಳು ಹಾಗೂ ಪಟ್ಟಣಗಳನ್ನು ಕೊಚ್ಚಿಕೊಂಡು ಹೋಗಿವೆ.
ಭಾರತೀಯರಿಗೂ ಭಾರೀ ಸಂಕಷ್ಟ: ನೇಪಾಳದಲ್ಲಿ ಸುಮಾರು 290 ಭಾರತೀಯರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಭಾರತದ ವಿದೇಶಾಂಗ ಸಚಿವಾಲಯದ ಮಾಹಿತಿ ಉಲ್ಲೇಖಿಸಲಾಗಿದೆ. ಇವರಲ್ಲಿ ತ್ರಿಶೂಲಿ-1 ಜಲವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ 73 ಮಂದಿ ಕೂಡ ಸೇರಿದ್ದಾರೆ. ಇನ್ನೂ 200ಕ್ಕೂ ಹೆಚ್ಚು ಭಾರತೀಯರು ಟಿಬೆಟ್ ಭಾಗದಲ್ಲಿ ಸಿಲುಕಿರುವ ಬಗ್ಗೆ ಮಾಹಿತಿ ಇದೆ.
ರಕ್ಷಣಾ ಕಾರ್ಯಾಚರಣೆಯಲ್ಲಿ 796 ಮಂದಿಯನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದ್ದು, ಮತ್ತೊಂದು 796 ಮಂದಿಯನ್ನು ಭೂಮಾರ್ಗದಲ್ಲಿ ಸ್ಥಳಾಂತರಿಸಲಾಗಿದೆ ಎಂದು ನೇಪಾಳ ಪೊಲೀಸರು ತಿಳಿಸಿದ್ದಾರೆ. ಆದರೆ ರಸ್ತೆ, ಸೇತುವೆ ಹಾಗೂ ಇತರೆ ಮೂಲಸೌಕರ್ಯಗಳು ಭಾರೀ ಪ್ರಮಾಣದಲ್ಲಿ ಹಾನಿಗೊಳಗಾಗಿರುವುದರಿಂದ ದೂರದ ಪ್ರದೇಶಗಳನ್ನು ತಲುಪುವುದು ರಕ್ಷಣಾ ತಂಡಗಳಿಗೆ ದೊಡ್ಡ ಸವಾಲಾಗಿದೆ. ಇದರ ನಡುವೆ ಮತ್ತೊಂದು ಆತಂಕ ಎದುರಾಗಿದೆ. ಹಿಮನದಿ ಕುಸಿತದಿಂದ ನದಿಯ ಹರಿವಿಗೆ ಅಡ್ಡಿಯಾಗಿ ಹೊಸ ಬ್ಯಾರಿಯರ್ ಸರೋವರ ರೂಪುಗೊಂಡಿದ್ದು, ಅದು ಒಡೆದರೆ ಮತ್ತೊಂದು ಭೀಕರ ಪ್ರವಾಹ ಸಂಭವಿಸುವ ಸಾಧ್ಯತೆಯ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಪ್ರವಾಸಿಗರು ಮತ್ತು ಯಾತ್ರಿಕರೂ ನಾಪತ್ತೆ: ನೇಪಾಳದ ಪ್ರವಾಹಪೀಡಿತ ಪ್ರದೇಶಗಳಲ್ಲಿ ನಾಪತ್ತೆಯಾದವರಲ್ಲಿ ಹಲವು ದೇಶಗಳ ಪ್ರವಾಸಿಗರು, ಟ್ರೆಕ್ಕರ್ಗಳು ಹಾಗೂ ಕೈಲಾಸ ಮಾನಸಸರೋವರ ಯಾತ್ರಿಕರು ಸೇರಿದ್ದಾರೆ. ನೇಪಾಳದ ಪ್ರವಾಸೋದ್ಯಮ ಇಲಾಖೆಯ ಪ್ರಕಾರ ನೂರಾರು ವಿದೇಶಿ ಪ್ರವಾಸಿಗರು ಸಂಪರ್ಕಕ್ಕೆ ಸಿಗುತ್ತಿಲ್ಲ. ಒಟ್ಟಿನಲ್ಲಿ, ನೇಪಾಳ–ಟಿಬೆಟ್ ಗಡಿಯಲ್ಲಿ ಸಂಭವಿಸಿರುವ ಈ ದುರಂತವು ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ಭೀಕರ ಪ್ರವಾಹ ದುರಂತಗಳಲ್ಲಿ ಒಂದಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ನಾಪತ್ತೆಯಾದವರ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಇನ್ನಷ್ಟು ಬದಲಾಗುವ ಸಾಧ್ಯತೆಯಿದೆ.