ಬೆಂಗಳೂರು: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯದ ಆರೋಗ್ಯ ಕವಚ 108 ಅಂಬುಲೆನ್ಸ್ ಸೇವೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಸರ್ಕಾರಕ್ಕೆ ಮುಷ್ಕರದ ಎಚ್ಚರಿಕೆ ನೀಡಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸಲು ಸರ್ಕಾರಕ್ಕೆ 15 ದಿನಗಳ ಗಡುವು ನೀಡಿರುವ ನೌಕರರ ಸಂಘಟನೆಗಳು, ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಸೆಪ್ಟೆಂಬರ್ 20ರಿಂದ ಸಾಮೂಹಿಕ ಹೋರಾಟಕ್ಕೆ ಇಳಿಯುವುದಾಗಿ ಘೋಷಿಸಿವೆ.
ಈ ಸಂಬಂಧ ಸುವರ್ಣ ಕರ್ನಾಟಕ ಆರೋಗ್ಯ ಕವಚ-108 ನೌಕರರ ಸಂಘ ಹಾಗೂ ಕರ್ನಾಟಕ ರಾಜ್ಯ ಆರೋಗ್ಯ ಕವಚ ಅಂಬುಲೆನ್ಸ್ ನೌಕರರ ಸಂಘದ ಪದಾಧಿಕಾರಿಗಳು ಆರೋಗ್ಯ ಸಚಿವರು ಮತ್ತು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು ತಮ್ಮ ಸಮಸ್ಯೆಗಳು ಹಾಗೂ ಬೇಡಿಕೆಗಳನ್ನು ವಿವರಿಸಿದ್ದಾರೆ. ಜಿವಿಕೆ ಸಂಸ್ಥೆಯ ಅಧೀನದಲ್ಲಿ ಸಾವಿರಾರು ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ಹಲವು ವರ್ಷಗಳಿಂದ ತಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರೆತಿಲ್ಲ ಎಂದು ಸಂಘಟನೆಗಳು ಆರೋಪಿಸಿವೆ.
ನೇಮಕಾತಿ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ ಪ್ರತಿವರ್ಷ ವೇತನ ಪರಿಷ್ಕರಣೆ ಮಾಡಬೇಕು ಎಂಬುದು ನೌಕರರ ಪ್ರಮುಖ ಬೇಡಿಕೆಯಾಗಿದೆ. 2017ರಿಂದ 2022ರವರೆಗೆ ಯಾವುದೇ ರೀತಿಯ ವೇತನ ಹೆಚ್ಚಳವಾಗಿಲ್ಲ ಎಂದು ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ವಲಯವಾರು ನಿಗದಿಪಡಿಸಿರುವ ವೇತನ ವ್ಯವಸ್ಥೆಯನ್ನು ರದ್ದುಪಡಿಸಿ ಎಲ್ಲ ನೌಕರರಿಗೂ ಏಕರೂಪ ವೇತನ ಜಾರಿಗೊಳಿಸಬೇಕು ಹಾಗೂ ಜೇಷ್ಠತೆಯ ಆಧಾರದ ಮೇಲೆ ವೇತನ ನಿಗದಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಮೂರು ಪಾಳಿಗಳಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗೆ ಅಗತ್ಯ ವಾಹನ ಸೌಲಭ್ಯ ಒದಗಿಸಬೇಕು. ಕಾರ್ಮಿಕ ಇಲಾಖೆಯ ನಿಯಮಾವಳಿಯಂತೆ ಪ್ರತಿ ತಿಂಗಳ 7ನೇ ತಾರೀಖಿನೊಳಗೆ ವೇತನ ಪಾವತಿಸಬೇಕು ಎಂಬ ಬೇಡಿಕೆಯನ್ನೂ ಸಂಘಟನೆಗಳು ಮುಂದಿಟ್ಟಿವೆ. ಜೊತೆಗೆ, ಕರ್ತವ್ಯದ ವೇಳೆ ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಲಾಗಿದೆ.
ಕೆಲಸದ ಸ್ಥಳಗಳಲ್ಲಿ ಮೂಲಸೌಕರ್ಯ ಕೊರತೆಯಿರುವುದನ್ನೂ ನೌಕರರು ಪ್ರಸ್ತಾಪಿಸಿದ್ದಾರೆ. ಎಲ್ಲಾ ಕೆಲಸದ ಸ್ಥಳಗಳಲ್ಲಿ ಶೌಚಾಲಯ, ವಿಶ್ರಾಂತಿ ಕೊಠಡಿ ಹಾಗೂ ಅಂಬುಲೆನ್ಸ್ ವಾಹನಗಳನ್ನು ಸ್ವಚ್ಛಗೊಳಿಸಲು ಸಮರ್ಪಕ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ. ಇದೇ ವೇಳೆ, 108 ಅಂಬುಲೆನ್ಸ್ ನೌಕರರ ಮುಷ್ಕರದಿಂದ ರೋಗಿಗಳಿಗೆ ಯಾವುದೇ ರೀತಿಯ ತೊಂದರೆಯಾದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವರು ಎಚ್ಚರಿಕೆ ನೀಡಿದ್ದಾರೆ. ಚಾಲಕರು ಹಾಗೂ ಸಿಬ್ಬಂದಿಗೆ ಯಾವುದೇ ಸಮಸ್ಯೆಗಳಿದ್ದರೆ ಸಂಬಂಧಪಟ್ಟ ಸೇವಾ ಸಂಸ್ಥೆಯೊಂದಿಗೆ ಚರ್ಚಿಸಿ ಪರಿಹರಿಸಿಕೊಳ್ಳಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ.