ಬೆಂಗಳೂರು: ರಾಜ್ಯಸಭಾ ಚುನಾವಣ ಟಿಕೆಟ್ ಕೈ ತಪ್ಪಿದ್ದಕ್ಕೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು (HD Devegowda) ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು " ನನ್ನ ಹಾಗೂ ಮೋದಿ (Modi) ಸಂಬಂಧ ಕೇವಲ ರಾಜ್ಯಸಭಾ ಸದಸ್ಯ ಸ್ಥಾನದಿಂದ ಮುಗೀತು ಎಂದು ಭಾವಿಸಬೇಡಿ, ರಾಜ್ಯ ಹಾಗೂ ದೇಶದ ವಿಚಾರದಲ್ಲಿ ನನ್ನ ಶಕ್ತಿ ಮೀರಿ ಕೆಲಸ ಮಾಡ್ತೇನೆ ಎಂದು ಹೇಳಿದ್ದಾರೆ.
ಬೆಂಗಳೂರಿನ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಹೆಚ್ಡಿಡಿ, ವಿರೋಧಿಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ. ನಾನು ಸುಮ್ಮನೆ ಕೂರಲ್ಲ, ನನ್ನ ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ರಾಜ್ಯ ಮತ್ತು ದೇಶದ ವಿಚಾರವನ್ನ ಯಾರ ಹಂಗಿಲ್ಲದೆ ಮಾತಾಡ್ತೇನೆ ಎಂದವರು ತಿಳಿಸಿದ್ದಾರೆ. ನನ್ನ ಹಾಗೂ ಮೋದಿ ಸಂಬಂಧ ರಾಜ್ಯಸಭಾ ಸದಸ್ಯ ಸ್ಥಾನದಿಂದ ಮುಗೀತು ಎಂದು ಭಾವಿಸಬೇಡಿ ಎಂದೂ ಅವರು ತಿವಿದಿದ್ದಾರೆ.
ರಾಜ್ಯಸಭೆಗೆ ಆಯ್ಕೆಯಾಗೋ ವ್ಯಾಮೋಹವಿಲ್ಲ..!
ನಾನು ರಾಜಕೀಯಕ್ಕೆ ಬಂದು 7 ದಶಕಗಳು ಕಳೆದಿವೆ. ಜನ ಪರ ಸೇವೆ ಸಲ್ಲಿಸಿದ್ದೇನೆ. ರಾಜ್ಯಸಭಾ ಸದಸ್ಯ ಆಗಬೇಕು ಎಂಬ ವ್ಯಾಮೋಹ ಇದ್ದಿದ್ರೆ ಕೇಂದ್ರದ ಮುಖಂಡರನ್ನ ಭೇಟಿ ಮಾಡ್ತಿದ್ದೆ. ಈ ನಡುವೆ ಕುಮಾರಸ್ವಾಮಿ (HD Kumaraswamy) ನಾವು ರಾಜ್ಯಸಭೆಗೆ ಅಪೇಕ್ಷೆ ಮಾಡಲ್ಲ ಎಂದಿದ್ದು, ಬಿಜೆಪಿಗೆ ಒಂದು ಸೀಟ್ ಸಿಗುತ್ತೆ. ನಾವ್ಯಾಕೆ 18 ಜನ ಇದ್ದು ಸೀಟ್ ಕೇಳಬೇಕು ಎಂದಿದ್ದರು.
ಮೋದಿ ಮತ್ತು ನನ್ನ ನಡುವಿನ ಸಂಬಂಧ ಒಂದು ರಾಜ್ಯಸಭಾ ಸೀಟಿಂದ ಅಲ್ಲ. ಕಳೆದ 10 ವರ್ಷಗಳಿಂದ ನಮ್ಮದು ವೈಯಕ್ತಿಕ ಸಂಬಂಧ. ಮೋದಿಯವರ ಬಗ್ಗೆ, ಆಡಳಿತದ ಬಗ್ಗೆ ನನ್ನ ಭಾವನೆಯನ್ನ ನಿರ್ಭಯವಾಗಿ ಹೇಳಿದ್ದೇನೆ. ಮೋದಿ ನಾಯಕತ್ವ ಸಮರ್ಥನೆ ಮಾಡಿದ್ದೇನೆ. ನನ್ನ ಮೋದಿಯವರ ಸಂಬಂಧ ಹೀಗೆ ಮುಂದುವರೆಯುತ್ತದೆ. ರಾಜ್ಯ ಸಭಾ ಸದಸ್ಯ ಸ್ಥಾನ ಇಲ್ಲ ಅಂದರೂ ಮೋದಿಯವರ ಜೊತೆ ನನ್ನ ಪತ್ರ ವ್ಯವಹಾರ ಇರುತ್ತದೆ ಎಂದವರು ತಿಳಿಸಿದ್ದಾರೆ.
ಜೆಡಿಎಸ್ ಪಕ್ಷದ ಬೆಳವಣಿಗೆಗೂ ಶಕ್ತಿ ಮೀರಿ ಕೆಲಸ ಮಾಡ್ತೇನೆ. ಎನ್ಡಿಎಯಲ್ಲಿ ಇದ್ದೇವೆ, ಆದ್ರೂ ಪಕ್ಷ ಸಂಘಟನೆ ಮಾಡಬೇಕು. ಜಿಬಿಎ ಚುನಾವಣೆಗೆ ಕಮಿಟಿ ಮಾಡಲಾಗಿದೆ. ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಸೇರಿ ಸ್ಥಳೀಯ ಸಂಸ್ಥೆ ಚುನಾವಣೆಗೆ ಸಿದ್ಧತೆ ಮಾಡ್ತೇವೆ. ರಾಜ್ಯಸಭೆ ಆಯ್ಕೆ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿ ವ್ಯಾಖ್ಯಾನ ಮಾಡ್ತಿದ್ದಾರೆ. ಸ್ನೇಹಿತರು ದೇವೇಗೌಡರಿಗೆ ಟಿಕೆಟ್ ಕೊಡಬೇಕು ಅಂದಿದ್ದರು. ಆದರೆ ನಾನು ಅವರಿಗೆ ಸಮಾಧಾನ ಮಾಡಿದ್ದೇನೆ ಎಂದವರು ತಿಳಿಸಿದ್ದಾರೆ.