Search


ಜೈಲಿನಲ್ಲಿ ನಟ ದರ್ಶನ್‌ ಭೇಟಿಯಾದ ಧನ್ವೀರ್‌; ನಮ್ಮಿಬ್ಬರ ನಡುವೆ ಯಾವುದೇ ಮನಸ್ತಾಪವಿಲ್ಲ ಎಂದು ಸ್ಪಷ್ಟನೆ

ಬೆಂಗಳೂರು: ಕಳೆದ ಕೆಲ ದಿನಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ಹರಿದಾಡುತ್ತಿದ್ದ ಸುದ್ದಿಗೆ ನಟ ಧನ್ವೀರ್‌ ಕ್ಲಾರಿಟಿ ಕೊಟ್ಟಿದ್ದಾರೆ, ʻನಟ ದರ್ಶನ್‌ ಜೊತೆಗೆ ನನಗೆ ಮನಸ್ತಾಪವಿಲ್ಲ, ನಮ್ಮಿಬ್ಬರ ನಡುವೆ ಜಗಳವಾಗಿದ್ದರೆ ನಾನ್ಯಾಕೆ ಅವರನ್ನ ನೋಡಲು ಜೈಲಿಗೆ ಬರ್ತಿದ್ದೆ ಎಂದು ನಟ ಧನ್ವೀರ್‌ ಮಾಧ್ಯಮಗಳಿಗೆ ಉತ್ತರಿಸಿದ್ದಾರೆ. 

ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪದ ಮೇಲೆ ಜೈಲಿನಲ್ಲಿರುವ ನಟ ದರ್ಶನ್‌ರನ್ನ ನೋಡಲು ಇಂದು ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಅವರ ಜೊತೆಗೆ ನಟ ಧನ್ವೀರ್‌ ಆಗಮಿಸಿದರು. ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ ನಟ, ಜೈಲಿನೊಳಗೆ ಹೋಗಿ ನಟ ದರ್ಶನ್‌ರನ್ನ ಭೇಟಿಯಾಗಿ ಬಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ʻನಮ್ಮ ಮಧ್ಯೆ ಯಾವುದೇ ಮನಸ್ತಾಪ ಇಲ್ಲ. ಯಾರು ಹೇಳಿದ್ದು? ಅವರನ್ನೇ ಕರೆದುಕೊಂಡು ಬನ್ನಿ. ಮನಸ್ತಾಪ ಇದ್ದಿದ್ದರೆ ಅವರನ್ನು ಭೇಟಿ ಮಾಡಲು ನಾನು ಜೈಲಿಗೆ ಬರುತ್ತಿದ್ನಾ? ದರ್ಶನ್‌ ಆರಾಮವಾಗಿದ್ದಾರೆ ಎಂದು ತಿಳಿಸಿದ್ದಾರೆ.

ಈ ಮೂಲಕ ಇತ್ತೀಚೆಗೆ ಕೇಳಿಬಂದಿದ್ದ ಮನಸ್ತಾಪದ ಸುದ್ದಿಗಳಿಗೆ ಅವರು ಸ್ಪಷ್ಟನೆ ನೀಡಿದ್ದಾರೆ. ಇದೇ ವೇಳೆ ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ದರ್ಶನ್‌ ಅವರ ತಾಯಿ ಮೀನಾ ಕೂಡ ಜೈಲಿಗೆ ಭೇಟಿ ನೀಡಿದ್ದರು. ಇಬ್ಬರೂ ದರ್ಶನ್‌ ಅವರನ್ನು ಭೇಟಿ ಮಾಡಿ ಪ್ರತ್ಯೇಕ ಕಾರುಗಳಲ್ಲಿ ಜೈಲಿನಿಂದ ಹೊರಟಿದ್ದಾರೆ ವಿಜಯಲಕ್ಷ್ಮಿ ಮತ್ತು ಧನ್ವೀರ್‌ ಇಬ್ಬರೂ ಒಂದೇ ಸಮಯದಲ್ಲಿ ದರ್ಶನ್‌ ಅವರನ್ನು ಭೇಟಿ ಮಾಡಿರುವುದು ಇದೀಗ ಅಭಿಮಾನಿಗಳ ಗಮನ ಸೆಳೆದಿದೆ.

ಇತ್ತೀಚೆಗೆ ವಿಜಯಲಕ್ಷ್ಮಿ ಮತ್ತು ಧನ್ವೀರ್‌ ನಡುವೆ ಮನಸ್ತಾಪವಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಜೈಲಿನಲ್ಲಿ ನಡೆದ ಈ ಭೇಟಿಯ ಬಳಿಕ ವಿಜಯಲಕ್ಷ್ಮಿ ಮತ್ತು ಧನ್ವೀರ್‌ ನಡುವಿನ ಮನಸ್ತಾಪಕ್ಕೆ ತೆರೆ ಬಿತ್ತಾ ಎಂಬ ಪ್ರಶ್ನೆಯೂ ಅಭಿಮಾನಿಗಳಲ್ಲಿ ಮೂಡಿದೆ

By Ravikumar - 18-08-2026


Ads in Post