ಮುಂಬೈ: ಗಾಂಧಿ ಜಯಂತಿ ಅಂಗವಾಗಿ ಮುಂಬೈನ ಪ್ರತಿಷ್ಠಿತ ಶಿವಾಜಿ ಪಾರ್ಕ್ನಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ತನ್ನ ಎರಡನೇ ಹಂತದ ಬೃಹತ್ ಅಭಿಯಾನಕ್ಕೆ ಚಾಲನೆ ನೀಡಿತು. ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ CJP ಸಂಸ್ಥಾಪಕ ಅಭಿಜೀತ್ ದೀಪ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ತೀವ್ರ ಟೀಕೆಗಳನ್ನು ಮಾಡಿದರು. ‘ಒಂದು ದೇಶ, ಒಂದು ಚುನಾವಣೆ’ ಎಂಬ ಘೋಷಣೆಯ ಬದಲಾಗಿ ಬಿಜೆಪಿಗೆ ‘ಒಂದು ದೇಶ, ಒಂದು ಪಕ್ಷ’ ಎಂಬುದೇ ಬೇಕಾಗಿದೆ ಎಂದು ಅವರು ಆರೋಪಿಸಿದರು.
ಮೋದಿ ಸರ್ಕಾರದ ವಿವಿಧ ಕ್ರಮಗಳನ್ನು ಉಲ್ಲೇಖಿಸಿದ ದೀಪ್ಕೆ, ನೋಟು ಅಮಾನ್ಯೀಕರಣ, ಕೋವಿಡ್ ಲಸಿಕೆ ಪಡೆಯುವುದು ಹಾಗೂ ಇದೀಗ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಸೇರಿದಂತೆ ಹಲವು ಸಂದರ್ಭಗಳಲ್ಲಿ ಜನರು ಸರದಿಯಲ್ಲಿ ನಿಲ್ಲುವ ಪರಿಸ್ಥಿತಿ ಎದುರಾಗಿದೆ ಎಂದು ಟೀಕಿಸಿದರು. ಕಳೆದ 12 ವರ್ಷಗಳಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಹುದಾಗಿದ್ದರೂ, ಜನರನ್ನು ಪದೇಪದೆ ಸರದಿಯಲ್ಲಿ ನಿಲ್ಲಿಸಲಾಗಿದೆ ಎಂದು ಅವರು ಆರೋಪಿಸಿದರು.
ಈ ವ್ಯಕ್ತಿ ನಮ್ಮ ಹಣದಲ್ಲಿ ವಿಶ್ವದಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಒಂದು ವಿಷಯವನ್ನು ಅವರು ಪದೇಪದೆ ಹೇಳುತ್ತಾರೆ—‘ನಾನು ಚಹಾ ಮಾರಿದ್ದೇನೆ, ನಾನು ಚಹಾ ಮಾರಿದ್ದೇನೆ, ನಾನು ಚಹಾ ಮಾರಿದ್ದೇನೆ’ ಎಂದು. ನೀವು ಏಕೆ ಚಹಾ ಮಾರಿದ್ದಿರಿ? ನೀವು ಚಹಾ ಮಾರಬೇಕೆಂದು ನಾವು ಕೇಳಿದ್ದೇವೆಯೇ? ನೀವು ಶಾಲೆಗೆ ಹೋಗಿ, ವಿದ್ಯಾಭ್ಯಾಸ ಮಾಡಿ, ಉದ್ಯೋಗ ಪಡೆದುಕೊಳ್ಳಬಹುದಿತ್ತು. ‘ನಾನು ಬಡ ತಾಯಿಯ ಮಗ’ ಎಂದು ಹೇಳುತ್ತಾರೆ. ಇಂದು ದೇಶದ ಪ್ರತಿಯೊಬ್ಬ ಮಗುವೂ ಬಡ ತಾಯಿಯ ಮಗನಾಗಲು ಕಾರಣ ನೀವೇ ಎಂದು ದೀಪ್ಕೆ ಹೇಳಿದ್ದಾನೆ.
ಅಭಿಯಾನವನ್ನು ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತಗೊಳಿಸದೆ ಗೋವಾ ಮತ್ತು ಕರ್ನಾಟಕದಲ್ಲಿಯೂ ಮುಂದಿನ ಹಂತದ ಪ್ರತಿಭಟನೆಗಳನ್ನು ನಡೆಸಿ ದೇಶಾದ್ಯಂತ ವಿಸ್ತರಿಸುವುದಾಗಿ CJP ಘೋಷಿಸಿದೆ. ಪ್ರತಿಭಟನೆಗೆ ನಟರಾದ ನಾಸಿರುದ್ದೀನ್ ಶಾ ಮತ್ತು ಶಬಾನಾ ಆಜ್ಮಿ, ಸಂಗೀತ ಸಂಯೋಜಕ ವಿಶಾಲ್ ದದ್ಲಾನಿ, ನಿರ್ದೇಶಕ ವಿಶಾಲ್ ಭಾರದ್ವಾಜ್ ಹಾಗೂ ಹಾಸ್ಯನಟ ರಾಜೀವ್ ನಿಗಮ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ದೀಪ್ಕೆ ಅವರಿಗೆ ಬೆಂಬಲ ವ್ಯಕ್ತಪಡಿಸಿದರು.