ಬಿಗ್ಬಾಸ್ ಕನ್ನಡ ಸೀಸನ್ 13 ಗ್ರ್ಯಾಂಡ್ ಓಪನಿಂಗ್ಗೆ ಭರ್ಜರಿ ಸಿದ್ಧತೆಗಳು ನಡೆಯುತ್ತಿದ್ದು, ಜಾಲಿವುಡ್ ಸ್ಟುಡಿಯೋದಲ್ಲಿ ಕಾರ್ಯಕ್ರಮದ ಚಿತ್ರೀಕರಣ ಜೋರಾಗಿದೆ. ಈಗಾಗಲೇ ಹಲವು ಸ್ಪರ್ಧಿಗಳು ಬಿಗ್ಬಾಸ್ ಮನೆಗೆ ಎಂಟ್ರಿ ನೀಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯು ಗ್ರ್ಯಾಂಡ್ ಓಪನಿಂಗ್ನ ಪ್ರೋಮೊಗಳನ್ನು ಹಂಚಿಕೊಳ್ಳುತ್ತಿದ್ದು, ನಟಿ ಸಂಗೀತಾ ಭಟ್ ಹಾಗೂ ನಟಿ ಕಾವ್ಯಾ ಗೌಡ ಅವರ ಎಂಟ್ರಿಯ ನಂತರ ಇದೀಗ ಖ್ಯಾತ ಕನ್ನಡ ಸಿನಿಮಾ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ಎಂಟ್ರಿಯ ಪ್ರೋಮೊ ಬಿಡುಗಡೆ ಮಾಡಿದೆ.
ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಸ್ಪರ್ಧಿಯಾಗಿ ಬಿಗ್ಬಾಸ್ ಮನೆಗೆ ಕಾಲಿಟ್ಟಿರುವುದು ವಿಶೇಷವಾಗಿದೆ. ಅಂದಹಾಗೆ, ಇದು ಅವರ ಎರಡನೇ ಬಿಗ್ಬಾಸ್ ಎಂಟ್ರಿಯಾಗಿದೆ. ಈ ಹಿಂದೆ ಬಿಗ್ಬಾಸ್ ಕನ್ನಡ ಸೀಸನ್ 4ರಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಅವರು ಮನೆ ಪ್ರವೇಶಿಸಿದ್ದರು. ಆದರೆ, ತೀವ್ರ ಕಾಲು ನೋವು ಹಾಗೂ ಆರೋಗ್ಯ ಸಮಸ್ಯೆಯಿಂದಾಗಿ ಅವರು ಹೆಚ್ಚು ದಿನ ಮನೆಯಲ್ಲಿರಲು ಸಾಧ್ಯವಾಗದೆ ಕಾರ್ಯಕ್ರಮದಿಂದ ಹೊರಬಂದಿದ್ದರು. ಇದೀಗ ಮತ್ತೊಮ್ಮೆ ಬಿಗ್ಬಾಸ್ ವೇದಿಕೆಗೆ ಮರಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಓಂ ಪ್ರಕಾಶ್ ರಾವ್ ಹಲವು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಕ್ವಾಟ್ಲೆ ಕಿಚನ್’ ಕಾರ್ಯಕ್ರಮದಲ್ಲಿಯೂ ಅವರು ಭಾಗವಹಿಸಿದ್ದರು. ಈಗ ಬಿಗ್ಬಾಸ್ ಕನ್ನಡ ಸೀಸನ್ 13ರ ಸ್ಪರ್ಧಿಯಾಗಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ವೇದಿಕೆಯಲ್ಲಿ ಅವರನ್ನು ಸ್ವಾಗತಿಸಿದ ಕಿಚ್ಚ ಸುದೀಪ್, ಓಂ ಪ್ರಕಾಶ್ ರಾವ್ ಅವರ ಹಳೆಯ ವಿಡಿಯೋವೊಂದನ್ನು ತೋರಿಸಿದರು. ಅದರಲ್ಲಿ ಅವರು ಟೆನ್ಷನ್ ಆದಾಗ ತಲೆ ಕೆರೆದುಕೊಳ್ಳುವ ದೃಶ್ಯವಿತ್ತು.
ಈ ವಿಡಿಯೋ ನೋಡಿ ಪ್ರತಿಕ್ರಿಯಿಸಿದ ಓಂ ಪ್ರಕಾಶ್ ರಾವ್, “ಹೀಗೆ ತಲೆ ಕೆರೆದುಕೊಂಡರೆ ನನಗೆ ಸಮಾಧಾನವಾಗುತ್ತದೆ” ಎಂದು ಹೇಳಿದರು. ಇದಕ್ಕೆ ಸುದೀಪ್, “ನೀವು ಬಿಗ್ಬಾಸ್ ಮನೆಯಲ್ಲಿರುವಷ್ಟು ದಿನ ಎಷ್ಟು ಬಾರಿ ಬೀಪ್ ಹಾಕಬೇಕಾಗುತ್ತದೆಯೋ?” ಎಂದು ತಮಾಷೆ ಮಾಡಿದರು. ಅದಕ್ಕೆ ಓಂ ಪ್ರಕಾಶ್ ರಾವ್ ಕೂಡ ಹಾಸ್ಯಮಯವಾಗಿ ಪ್ರತಿಕ್ರಿಯಿಸಿ, “ವಾಹಿನಿಯವರು ದೊಡ್ಡ ಮನಸ್ಸು ಮಾಡಿ ನನ್ನ ಮಾತುಗಳಿಗೆ ಬೀಪ್ ಹಾಕದೆ, ಕೇಳಲು ಚೆನ್ನಾಗಿದೆ ಎಂದು ರಾಜ್ಯದ ಜನರಿಗೆ ಕೇಳಲು ಬಿಟ್ಟರೆ ಅನುಕೂಲವಾಗುತ್ತದೆ” ಎಂದರು. ಅವರ ಮಾತಿಗೆ ಸುದೀಪ್ ಕೂಡ ನಕ್ಕುಬಿಟ್ಟರು.