ಬೆಂಗಳೂರು: ಕಾಲಿನ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಬಿಗ್ಬಾಸ್ ಕನ್ನಡ ಸೀಸನ್ 13ರ ಸ್ಪರ್ಧಿ ಹಾಗೂ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಶೋನಿಂದ ಹೊರಬಂದಿದ್ದಾರೆ. ಆರೋಗ್ಯದ ಕಾರಣದಿಂದಾಗಿ ಬಿಗ್ಬಾಸ್ ಮನೆಯಿಂದ ಹೊರಬಂದು ಮನೆಯಲ್ಲಿ ತಮ್ಮ ಆಟವನ್ನು ಅರ್ಧಕ್ಕೆ ನಿಲ್ಲಿಸಿ ಹೊರಬರುವ ನಿರ್ಧಾರ ಕೈಗೊಂಡಿದ್ದಾರೆ.
ಓಂ ಪ್ರಕಾಶ್ ರಾವ್ ಬಿಗ್ಬಾಸ್ ಮನೆಯಿಂದ ಹೊರನಡೆದಿರುವ ಕುರಿತು ಕಲರ್ಸ್ ಕನ್ನಡ ವಾಹಿನಿ ಅಧಿಕೃತ ಪೋಸ್ಟ್ ಹಂಚಿಕೊಂಡಿದೆ. ಸೋಮವಾರ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಬಿಗ್ಬಾಸ್ ಮನೆಯಿಂದ ಹೊರಕ್ಕೆ ಕರೆತಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಹಿಂದೆ ಓಂ ಪ್ರಕಾಶ್ ರಾವ್ ಅಪಘಾತಕ್ಕೊಳಗಾಗಿದ್ದು, ಅವರ ಕಾಲಿಗೆ ಗಂಭೀರ ಪೆಟ್ಟಾಗಿತ್ತು. ಇದೀಗ ಅದೇ ಕಾಲಿನಲ್ಲಿ ಮತ್ತೆ ಊತ ಹಾಗೂ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಿಡದಿಯ ಕಾಡುಮನೆ ಎಸ್ಟೇಟ್ ಸಮೀಪದ ‘ಆರಾಧ್ಯ’ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.
ಬಿಗ್ಬಾಸ್ ಮನೆಯಲ್ಲಿ ನಿರಂತರವಾಗಿ ಟಾಸ್ಕ್ಗಳಲ್ಲಿ ಭಾಗವಹಿಸಿದ್ದರಿಂದ ಕಾಲಿನ ನೋವು ಉಲ್ಬಣಗೊಂಡಿದೆ ಎನ್ನಲಾಗಿದೆ. ಹೆಚ್ಚಿನ ಚಿಕಿತ್ಸೆ ಹಾಗೂ ವೈದ್ಯಕೀಯ ತಪಾಸಣೆ ಅಗತ್ಯವಿರುವ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬಳಿಕ ಆರೋಗ್ಯದ ಕಾರಣದಿಂದ ಶೋ ತೊರೆಯುವ ನಿರ್ಧಾರವನ್ನು ಓಂ ಪ್ರಕಾಶ್ ರಾವ್ ಕೈಗೊಂಡಿದ್ದಾರೆ. ಸದ್ಯ ಓಂ ಪ್ರಕಾಶ್ ರಾವ್ ಅವರ ಆರೋಗ್ಯದ ಕುರಿತು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಪ್ರಕಟಣೆಯನ್ನು ನಿರೀಕ್ಷಿಸಲಾಗುತ್ತಿದೆ.