Search


ನೀಟ್ ಫಲಿತಾಂಶದಿಂದ ಮನನೊಂದ ವಿದ್ಯಾರ್ಥಿನಿ ಆತ್ಮಹ@ತ್ಯೆ; ಮಹಾರಾಷ್ಟ್ರದಲ್ಲಿ ದಾರುಣ ಘಟನೆ

ಮಹಾರಾಷ್ಟ್ರದ ಅಹಿಲ್ಯಾನಗರ ಜಿಲ್ಲೆಯ ಕರ್ಜತ್ ತಾಲ್ಲೂಕಿನ ಜಲಾಲ್ಪುರ ಗ್ರಾಮದಲ್ಲಿ ನೀಟ್ (NEET) ಪರೀಕ್ಷೆಯ ಫಲಿತಾಂಶದಿಂದ ಮನನೊಂದಿದ್ದ 19 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಅಂಕಿತಾ ಸಾಂಗ್ಲೆ ಎಂದು ಗುರುತಿಸಲಾಗಿದೆ. ಆನ್‌ಲೈನ್ ಕೋಚಿಂಗ್ ಮೂಲಕ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರು. ಆದರೆ, ಇತ್ತೀಚೆಗೆ ಪ್ರಕಟವಾದ ನೀಟ್ ಫಲಿತಾಂಶದಲ್ಲಿ ನಿರೀಕ್ಷಿತ ಅಂಕಗಳು ಬರದ ಹಿನ್ನೆಲೆಯಲ್ಲಿ ತೀವ್ರ ನಿರಾಸೆಗೆ ಒಳಗಾಗಿದ್ದರು ಎನ್ನಲಾಗಿದೆ.

ಘಟನೆಯ ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಡೆತ್‌ನೋಟ್ ಪತ್ತೆಯಾಗಿದ್ದು, ಅದನ್ನು ವಶಪಡಿಸಿಕೊಂಡಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಪರೀಕ್ಷಾ ಫಲಿತಾಂಶದಿಂದ ಉಂಟಾದ ಮಾನಸಿಕ ಒತ್ತಡವೇ ಆತ್ಮಹತ್ಯೆಗೆ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ. ಈ ಸಂಬಂಧ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. 

ಡೆತ್‌ನೋಟ್ ಸೇರಿದಂತೆ ಎಲ್ಲ ಸಾಕ್ಷ್ಯಗಳನ್ನು ಪರಿಶೀಲಿಸಲಾಗುತ್ತಿದ್ದು, ಸಾವಿಗೆ ನಿಖರ ಕಾರಣ ಏನು ಎಂಬುದು ತನಿಖೆಯ ನಂತರವೇ ಸ್ಪಷ್ಟವಾಗಲಿದೆ.ಈ ಘಟನೆ ಸ್ಪರ್ಧಾತ್ಮಕ ಪರೀಕ್ಷೆಗಳ ಒತ್ತಡ ಹಾಗೂ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಬಗ್ಗೆ ಮತ್ತೊಮ್ಮೆ ಗಂಭೀರ ಚರ್ಚೆಗೆ ಕಾರಣವಾಗಿದೆ. ಶಿಕ್ಷಣ ತಜ್ಞರು ಮತ್ತು ಮನೋವೈದ್ಯರು, ಪರೀಕ್ಷೆಯ ಫಲಿತಾಂಶವೇ ಜೀವನದ ಅಂತಿಮ ತೀರ್ಪಲ್ಲ ಎಂಬ ಅರಿವು ವಿದ್ಯಾರ್ಥಿಗಳಿಗೆ ಮೂಡಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ

By Ravikumar - 27-07-2026


Ads in Post