Search


ರಾಜೀನಾಮೆ ನೀಡಲು ಡಿಕೆ ಸೂಚನೆ; ಮನಸ್ಸಿಗೆ ನೋವಾಯ್ತು ಎಂದ ಬಸವರಾಜ್ ಹೊರಟ್ಟಿ

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ರಾಜೀನಾಮೆ ವಿಚಾರ ಇದೀಗ ರಾಜ್ಯ ರಾಜಕಾರಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮಗೆ ಕರೆ ಮಾಡಿ ರಾಜೀನಾಮೆ ನೀಡುವಂತೆ ಕೇಳಿಕೊಂಡಿದ್ದಾರೆ ಎಂದು ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

ಸಭಾಪತಿ ಸ್ಥಾನಕ್ಕೆ ಸಲೀಂ ಅಹ್ಮದ್ ಅವರನ್ನು ನೇಮಕ ಮಾಡುವ ವಿಚಾರದ ಹಿನ್ನೆಲೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಈ ಮನವಿ ಮಾಡಿದ್ದಾರೆ ಎಂದು ಹೊರಟ್ಟಿ ಹೇಳಿದ್ದಾರೆ. ಆದರೆ, ತಮ್ಮ ರಾಜೀನಾಮೆಗೆ ಯಾವುದೇ ಕಾರಣ ನೀಡದೆ ಹೀಗೆ ಕೇಳಿರುವುದು ಸರಿಯಲ್ಲ, ಅವರ ಈ ಮಾತಿನಿಂದ ನನಗೆ ತುಂಬಾ ನೋವು ತಂದಿದೆ. ಇತಿಹಾಸದಲ್ಲೇ ಈ ರೀತಿಯ ಬೆಳವಣಿಗೆ ನಡೆದಿರಲಿಲ್ಲ’ ಎಂದು ಹೊರಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.

ತಮ್ಮ ವಿರುದ್ಧ ಯಾವುದೇ ಆರೋಪ ಅಥವಾ ಕಾರಣವಿದ್ದರೆ ನೋಟಿಸ್ ನೀಡಲಿ. ಅದಕ್ಕೆ ಸೂಕ್ತ ಉತ್ತರ ನೀಡಲು ಸಿದ್ಧನಿದ್ದೇನೆ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಸದನದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದರೂ ಅದನ್ನು ಎದುರಿಸಲು ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ. ವಿಪಕ್ಷ ನಾಯಕರಾದ ಆರ್. ಅಶೋಕ್ ಹಾಗೂ ಛಲವಾದಿ ನಾರಾಯಣಸ್ವಾಮಿ ಅವರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಹೊರಟ್ಟಿ ತಿಳಿಸಿದ್ದಾರೆ.

ಸದ್ಯಕ್ಕೆ ರಾಜೀನಾಮೆ ನೀಡುವ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿರುವ ಹೊರಟ್ಟಿ, ತಮ್ಮ ಅವಧಿ ಪೂರ್ಣಗೊಳ್ಳುವ ಮುನ್ನವೇ ಸ್ಥಾನ ತೊರೆಯುವಂತೆ ಒತ್ತಡ ಹೇರುವುದು ಸರಿಯಲ್ಲ ಎಂಬ ನಿಲುವು ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆಯಿಂದ ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಸಂಬಂಧಿಸಿದ ರಾಜಕೀಯ ಚರ್ಚೆ ಮತ್ತಷ್ಟು ತೀವ್ರಗೊಂಡಿದ್ದು, ಮುಂದಿನ ದಿನಗಳಲ್ಲಿ ಈ ವಿಚಾರ ಯಾವ ತಿರುವು ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.

By Ravikumar - 04-08-2026


Ads in Post