Search


ದೇಶದ ಶ್ರೀಮಂತ ಮುಖ್ಯಮಂತ್ರಿಯಾದ ಡಿಕೆಶಿ: ಒಟ್ಟು ಆಸ್ತಿ ಎಷ್ಟು ಗೊತ್ತಾ..!

ಉಪ ಮುಖ್ಯಮಂತ್ರಿ ಸ್ಥಾನದಿಂದ ಮುಖ್ಯಮಂತ್ರಿಯಾಗಿ ಬಡ್ತಿ ಪಡೆದಿರುವ ಡಿಕೆ ಶಿವಕುಮಾರ್‌ ಅವರು ಇದೇ ಜೂನ್‌ 3ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಮೂಲಕ ದೇಶದ ಶ್ರೀಮಂತ ಸಿಎಂ ಎಂಬ ಕೀರ್ತಿಗೂ ಡಿಕೆಶಿ ಭಾಜನರಾಗುತ್ತಿದ್ದಾರೆ. ಹಾಗಾದರೆ ಡಿಕೆ ಶಿವಕುಮಾರ್‌ ಅವರ ಆಸ್ತಿ ಎಷ್ಟು ಎಂಬುದರ ವಿವರಗಳನ್ನ ನೋಡೋಣ ಬನ್ನಿ. 

ಕನಕಪುರದ ಬಂಡೆ ಎಂದೇ ಖ್ಯಾತರಾಗಿರುವ ಡಿಕೆ ಶಿವಕುಮಾರ್‌ ದೇಶದ ಶ್ರೀಮಂತ ರಾಜಕಾರಣಿಗಳ ಪಟ್ಟಿಯಲ್ಲಿ ಮುಂಚೂಣಿ ಸ್ಥಾನ ಪಡೆದಿದ್ದಾರೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿಯಲ್ಲಿ ಈ ವಿಚಾರ ಹೊರಬಿದ್ದಿದ್ದು, 2023 ಚುನಾವಣಾ ಅಫಿಡವಿಟ್‌ ಪ್ರಕಾರ ಡಿಕೆ ಶಿವಕುಮಾರ್‌ ಅವರ ಒಟ್ಟು ಆಸ್ತಿ ಎಷ್ಟಿದೆ ಎಂಬುದು ಬಹಿರಂಗವಾಗಿದೆ. ಎಡಿಆರ್‌ ವರದಿ ಪ್ರಕಾರ ಕಾಂಗ್ರೆಸ್‌ ಪಕ್ಷದ ಡಿ.ಕೆ.ಶಿವಕುಮಾರ್‌ ಅವರ ಬಳಿ 1,413 ಕೋಟಿ ಆಸ್ತಿ ಇದೆ.

931 ಕೋಟಿ ಆಸ್ತಿ ಹೊಂದಿರುವ ಆಂದ್ರ ಪ್ರದೇಶದ ಚಂದ್ರಬಾಬು ನಾಯ್ಡು ದೇಶದ ಶ್ರೀಮಂತ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ ಇದೀಗ ಡಿಕೆ ಶಿವಕುಮಾರ್‌ ಈ ದಾಖಲೆಯನ್ನ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ. ಹಾಗೆಯೇ ಡಿಕೆ ಶಿವಕುಮಾರ್‌ ಮತ್ತು ಚಂದ್ರಬಾಬು ನಾಯ್ಡು ನಂತರದ ಸ್ಥಾನದಲ್ಲಿ ಅರುಣಾಚಲ ಪ್ರದೇಶದ ಪೇಮಾ ಖಂಡು (₹332ಕೋಟಿ) ಮೂರನೇ ಸ್ಥಾನದಲ್ಲಿದ್ದಾರೆ.

ಇನ್ನು ದೇಶದ ಅತಿ ಶ್ರೀಮಂತ ರಾಜಕಾರಣಿ ಯಾರು ಎಂದು ನೋಡಿದರೆ, ಟಿಡಿಪಿ ಪಕ್ಷದ ಕೇಂದ್ರ ಸಚಿವ ಚಂದ್ರಶೇಖರ ಪೆಮ್ಮಸಾನಿ ಅವರು ಬರೋಬ್ಬರಿ 5,705 ಕೋಟಿ ಆಸ್ತಿ ಹೊಂದಿದ್ದು ದೇಶದ ಕುಬೇರ ಸಚಿವ ಎಂದು ಖ್ಯಾತರಾಗಿದ್ದಾರೆ. 

ಅತಿ ಹೆಚ್ಚು ಶತಕೋಟ್ಯಾಧಿಪತಿ ಸಚಿವರನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕವು ಮೊದಲ ಸ್ಥಾನದಲ್ಲಿದ್ದರೆ, ಟಿಡಿಪಿ ಪಕ್ಷದಿಂದಾಗಿ ಆಂಧ್ರಪ್ರದೇಶ ಎರಡನೇ ಸ್ಥಾನದಲ್ಲಿದೆ. ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷ (ಟಿಡಿಪಿ) ಎರಡನೇ ಅತಿ ಹೆಚ್ಚು ಶತಕೋಟ್ಯಾಧಿಪತಿ ಸಚಿವರನ್ನು ಹೊಂದಿರುವ ರಾಜಕೀಯ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆಂಧ್ರಪ್ರದೇಶದ ಆರು ಮಂದಿ ಸಚಿವರು ಶತಕೋಟ್ಯಾಧಿಪತಿಗಳಾಗಿದ್ದು, ಅವರಲ್ಲಿ ಐದು ಮಂದಿ ಟಿಡಿಪಿಯವರು ಮತ್ತು ಒಬ್ಬರು ಜನಸೇನಾ ಪಕ್ಷಕ್ಕೆ ಸೇರಿದ್ದಾರೆ.

By Ravikumar - 30-05-2026


Ads in Post