Search


ಸಿದ್ದರಾಮಯ್ಯರ ನೆನೆದು ಭಾವುಕ ಪೋಸ್ಟ್‌ ಹಂಚಿಕೊಂಡ ಡಿಕೆ ಶಿವಕುಮಾರ್‌

ಬೆಂಗಳೂರು: ನಿರ್ಗಮಿತ ಸಿಎಂ ಸಿದ್ದರಾಮಯ್ಯರ ಬಗ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ತಮ್ಮ ಎಕ್ಷ್‌ ಖಾತೆಯಲ್ಲಿ ಭಾವುಕ ಸಂದೇಶವೊಂದನ್ನ ಹಂಚಿಕೊಂಡಿದ್ದಾರೆ. "ಸಿದ್ದರಾಮಯ್ಯ ಅವರ ಐದು ದಶಕಗಳ ರಾಜಕೀಯ ಸೌಹಾರ್ದತೆ, ಹೋರಾಟದ ಹಾದಿ ಮತ್ತು ಜನಪರ ಆಡಳಿತವನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಡಿಕೆ ಶಿವಕುಮಾರ್, ‘ವೇಗವಾಗಿ ನಡೆಯಬೇಕೆಂದರೆ ಒಬ್ಬನೇ ನಡೆಯಬೇಕು, ಸುದೀರ್ಘ ದೂರ ಸಾಗಬೇಕೆಂದರೆ ಜೊತೆಯಾಗಿ ನಡೆಯಬೇಕು’ಎಂಬ ಗಾದೆಯೊಂದಿಗೆ ಕರುನಾಡಿನ ಪ್ರಗತಿಗಾಗಿ ಸಿದ್ದರಾಮಯ್ಯ ಜತೆ ಒಟ್ಟಾಗಿ ಸಾಗುವ ಬಗ್ಗೆ ಪುನರುಚ್ಚರಿಸಿದ್ದಾರೆ.

ಸಿದ್ದರಾಮಯ್ಯರ ದಿಢೀರ್‌ ರಾಜೀನಾಮೆ ರಾಜಕೀಯ ವಲಯದಲ್ಲಿ ಕೋಲಾಹಲಕ್ಕೆ ಕಾರಣವಾಗಿದ್ದರು ಕೂಡ, ಅಧಿಕಾರ ಹಂಚಿಕೆ ಪ್ರಕ್ರಿಯೆ ಸುಗಮವಾಗಿ ಮುಗಿದಿದೆ.  ಸಿದ್ದರಾಮಯ್ಯರ ವರ್ಚಸ್ಸಿಗೆ ಧಕ್ಕೆಯಾಗದಂತೆ ಕಾಂಗ್ರೆಸ್‌ ಹೈಕಮಾಂಡ್‌ ನಾಯಕರು ಮತ್ತು ರಾಜ್ಯ ನಾಯಕರು ವರ್ತಿಸಿದ್ದು, ಸಿದ್ದುಗೆ ಗೌರವ ಪೂರ್ವಕ ನಿವೃತ್ತಿ ದೊರೆತಿದೆ. ಸಿದ್ದರಾಮಯ್ಯರ ರಾಜೀನಾಮೆಗೆ ಅನೇಕ ನಾಯಕರು ಕಂಬಿನಿ ಮಿಡಿದಿದ್ದು, ಅನೇಕರು ಅವರ ಬಗ್ಗೆ ಭಾವುಕ ಮಾತುಗಳನ್ನ ಆಡಿದ್ದಾರೆ. ಆದರೆ ಎಲ್ಲಾ ಈ ಪ್ರಕ್ರಿಯೆ ವೇಳೆ ಮೌನವಾಗಿದ್ದ ಡಿ.ಕೆ ಶಿವಕುಮಾರ್‌ ಸಿದ್ದರಾಮಯ್ಯರ ಬಗ್ಗೆ ಭಾವುಕವಾದ ಪೋಸ್ಟ್‌ವೊಂದನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಡಿಕೆ ಶಿವಕುಮಾರ್ ಎಕ್ಸ್ ಸಂದೇಶದಲ್ಲೇನಿದೆ?

‘ದೇವರು ವರ ಅಥವಾ ಶಾಪ ನೀಡುವುದಿಲ್ಲ, ಆತ ಕೇವಲ ಅವಕಾಶಗಳನ್ನು ಮಾತ್ರ ನೀಡುತ್ತಾನೆ. ಆ ಸಿಕ್ಕ ಅವಕಾಶದಲ್ಲಿ ನಾವು ಏನನ್ನು ಸಾಧಿಸುತ್ತೇವೆ ಎಂಬುದು ಮುಖ್ಯವಾಗುತ್ತದೆ. ಈ ಆಲೋಚನೆಗೆ ನಮ್ಮ ಸಿದ್ದರಾಮಯ್ಯ ಅವರ ಜೀವನವೇ ಅತ್ಯುತ್ತಮ ಉದಾಹರಣೆ. ಮೈಸೂರು ಜಿಲ್ಲೆಯ ಸಣ್ಣ ಹಳ್ಳಿಯೊಂದರಲ್ಲಿ ಹುಟ್ಟಿ-ಬೆಳೆದು, ಸತತ ಹೋರಾಟಗಳ ಮೂಲಕ ರಾಜಕೀಯ ಪ್ರವೇಶಿಸಿ, ಸಾಮಾಜಿಕ ನ್ಯಾಯದ ಹರಿಕಾರರಾಗಿ ಹಾಗೂ ಬಡವರ ಬಂಧುವಾಗಿ ಕರ್ನಾಟಕದ ಮುಖ್ಯಮಂತ್ರಿಯಾದವರು ನನ್ನ ಆತ್ಮೀಯ ಶ್ರೇಯೋಭಿಲಾಷಿ ಸಿದ್ದರಾಮಯ್ಯನವರು’ ಎಂದು ಡಿಕೆ ಶಿವಕುಮಾರ್ ಉಲ್ಲೇಖಿಸಿದ್ದಾರೆ.

‘ಕರ್ನಾಟಕದ ರಾಜಕೀಯ ಇತಿಹಾಸದಲ್ಲೇ ಅತ್ಯಂತ ಯಶಸ್ವಿ, ಪ್ರಭಾವಶಾಲಿ ಮತ್ತು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವ ದೀರ್ಘಾವಧಿ ಮುಖ್ಯಮಂತ್ರಿಯಾಗಿ ಅವರು ಮೈಲಿಗಲ್ಲು ಸ್ಥಾಪಿಸಿದ್ದಾರೆ. ಅವರ ಜನಕೇಂದ್ರಿತ ಯೋಜನೆಗಳು ಮತ್ತು ರಾಜ್ಯದ ವಿವಿಧ ವಲಯಗಳ ಅಭಿವೃದ್ಧಿಗೆ ನೀಡಿದ ಕೊಡುಗೆಗಳು ಎಂದಿಗೂ ಮರೆಯಲಾಗದವು. ಸುಮಾರು 50 ವರ್ಷಗಳ ಅವರ ಸುದೀರ್ಘ ರಾಜಕೀಯ ಅನುಭವ ಮತ್ತು ಸಾಮಾಜಿಕ ಕಾಳಜಿ ಸದಾ ಸ್ಮರಣೀಯ. 2020ರಲ್ಲಿ ನಾನು ಕೆಪಿಸಿಸಿ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ದಿನದಿಂದ ಇಂದಿನವರೆಗೂ ಸಿದ್ದರಾಮಯ್ಯ ಅವರು ನನ್ನ ಹೆಗಲಿಗೆ ಹೆಗಲು ಕೊಟ್ಟು ಪಕ್ಷ ಸಂಘಟನೆಯಲ್ಲಿ ಭದ್ರ ಸ್ತಂಭದಂತೆ ಜೊತೆಯಾಗಿ ನಿಂತಿದ್ದಾರೆ’ ಎಂದು ಡಿಕೆಶಿ ಬರೆದಿದ್ದಾರೆ.

‘ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಸಚಿವನಾಗಿ ಹಾಗೂ ಉಪಮುಖ್ಯಮಂತ್ರಿಯಾಗಿ ಅವರ ಅನುಭವ, ಬುದ್ಧಿವಂತಿಕೆ ಮತ್ತು ರಾಜಕೀಯ ದೂರದೃಷ್ಟಿಯಿಂದ ನಿರಂತರವಾಗಿ ಕಲಿಯುವ ಸೌಭಾಗ್ಯ ನನ್ನದಾಗಿತ್ತು. ಮುಂಬರುವ ದಿನಗಳಲ್ಲೂ ರಾಜ್ಯದ ಕಲ್ಯಾಣಕ್ಕಾಗಿ ಮತ್ತು ನಮ್ಮ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಅವರ ಹಿರಿಯ ಅನುಭವದ ಮಾರ್ಗದರ್ಶನ ಮತ್ತು ಬೆಂಬಲ ನಮಗೆ ಹೀಗೆಯೇ ಮುಂದುವರಿಯುತ್ತದೆ ಎಂದು ನಾನು ಪ್ರಾಮಾಣಿಕವಾಗಿ ಆಶಿಸುತ್ತೇನೆ. ವೇಗವಾಗಿ ನಡೆಯಬೇಕಾದರೆ ಒಬ್ಬನೇ ನಡೆಯಬೇಕು, ಸುದೀರ್ಘ ದೂರ ಸಾಗಬೇಕಾದರೆ ಜೊತೆಯಾಗಿ ನಡೆಯಬೇಕು ಎಂಬ ನಾಣ್ಣುಡಿಯಂತೆ, ಕರ್ನಾಟಕದ ಜನರ ಸೇವೆಗಾಗಿ ಮತ್ತು ರಾಜ್ಯದ ಪ್ರಗತಿಗಾಗಿ ನಾವೆಲ್ಲರೂ ಒಟ್ಟಾಗಿ ಮುನ್ನಡೆಯೋಣ ಎಂದು ಡಿಕೆ ಶಿವಕುಮಾರ್ ತಮ್ಮ ಎಕ್ಸ್ ಸಂದೇಶದಲ್ಲಿ ಬರೆದುಕೊಂಡಿದ್ದಾರೆ.
 

By Ravikumar - 29-05-2026


Ads in Post