ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದಂತೆ ತಮ್ಮ ಮತ್ತು ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ನಡುವೆ ಯಾವುದೇ ರೀತಿಯ ಪೈಪೋಟಿ ಸೃಷ್ಟಿಸಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಗೆ ಸೂಚಿಸಿದ್ದಾರೆ. ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ಅಂತಿಮವಾಗಿ ನಿರ್ಧರಿಸಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಶನಿವಾರ ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಸಭೆ ನಡೆಯಿತು. ಅಕ್ಟೋಬರ್ 23ರಂದು ನಡೆಯಲಿರುವ ನಾಲ್ಕು ವಿಧಾನ ಪರಿಷತ್ ಸ್ಥಾನಗಳ ಚುನಾವಣೆಯ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳ ಮುಖಂಡರು ಸಭೆ ಸೇರಿ ಚುನಾವಣಾ ಕಾರ್ಯತಂತ್ರದ ಕುರಿತು ಚರ್ಚಿಸಿದರು. ಈ ವೇಳೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಸರ್ಕಾರ ರಚನೆಯ ಸಾಧ್ಯತೆ ಹಾಗೂ ಮುಖ್ಯಮಂತ್ರಿ ಸ್ಥಾನದ ವಿಚಾರವೂ ಚರ್ಚೆಗೆ ಬಂದಿದೆ.
ಸಭೆಯಲ್ಲಿ ಮಾತನಾಡಿದ ವಿಜಯೇಂದ್ರ, ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಹಾಗೂ ತಮ್ಮ ನಡುವೆ ಪೈಪೋಟಿಯ ವಾತಾವರಣ ನಿರ್ಮಿಸುವ ಅಗತ್ಯವಿಲ್ಲ ಎಂದು ಹೇಳಿದರು. ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ಹೈಕಮಾಂಡ್ ನಿರ್ಧರಿಸಲಿದೆ. ಈ ವಿಚಾರದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಬಹಿರಂಗವಾಗಿ ಹೇಳಿಕೆ ನೀಡಬಾರದು ಹಾಗೂ ಯಾವುದೇ ರೀತಿಯ ಘೋಷಣೆಗಳನ್ನು ಮಾಡಬಾರದು ಎಂದು ಸೂಚಿಸಿದರು.
ಎನ್ಡಿಎ ಮೈತ್ರಿಕೂಟ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ವಿಜಯೇಂದ್ರ, ಮುಖ್ಯಮಂತ್ರಿ ವಿಚಾರದಲ್ಲಿ ಕಾರ್ಯಕರ್ತರು ಯಾವುದೇ ಗೊಂದಲಕ್ಕೆ ಒಳಗಾಗಬಾರದು ಎಂದು ಹೇಳಿದರು. ಪಕ್ಷದ ಸಂಘಟನೆ ಹಾಗೂ ಮೈತ್ರಿಕೂಟದ ಗೆಲುವಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಇದೇ ವೇಳೆ ಸಭೆಯಲ್ಲಿ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ಮುಂದಿನ ಎಲ್ಲಾ ಚುನಾವಣೆಗಳನ್ನು ಎನ್ಡಿಎ ಮೈತ್ರಿಯಡಿ ಒಗ್ಗಟ್ಟಿನಿಂದ ಎದುರಿಸುವ ಅಗತ್ಯವಿದೆ ಎಂದು ಹೇಳಿದರು. ಬಿಹಾರ ಮಾದರಿಯಲ್ಲಿ ಚುನಾವಣಾ ತಂತ್ರ ರೂಪಿಸಿ, ಕರ್ನಾಟಕದಲ್ಲಿ ಎನ್ಡಿಎ ಮೈತ್ರಿಕೂಟ 180 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಬೇಕು ಎಂದು ಕಾರ್ಯಕರ್ತರು ಹಾಗೂ ಮುಖಂಡರಿಗೆ ಕರೆ ನೀಡಿದರು.
ಕುಮಾರಸ್ವಾಮಿ ಅವರ ಈ ಗುರಿಗೆ ಬಿಜೆಪಿ ನಾಯಕರು ಸಹಮತ ವ್ಯಕ್ತಪಡಿಸಿದ್ದು, ಸ್ಥಳೀಯ ಮಟ್ಟದ ಮುಖಂಡರು ಮತ್ತು ಕಾರ್ಯಕರ್ತರು ಸಂಘಟಿತವಾಗಿ ಕೆಲಸ ಮಾಡುವ ಮೂಲಕ ನಿಗದಿಪಡಿಸಿರುವ ಗುರಿಯನ್ನು ತಲುಪಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಮುಂಬರುವ ಚುನಾವಣೆಗಳನ್ನು ಬಿಜೆಪಿ-ಜೆಡಿಎಸ್ ಒಗ್ಗಟ್ಟಿನಿಂದ ಎದುರಿಸುವುದು ಹಾಗೂ ಮೈತ್ರಿಕೂಟದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.