ಬೆಂಗಳೂರು: ಪರಿಷತ್ ಚುನಾವಣೆಯಲ್ಲಿ ಪಕ್ಷಕ್ಕೆ ದ್ರೋಹ ಬಗೆದವರನ್ನು ಕಂಡು ಹಿಡಿಯಲು, ಆಣೆ-ಪ್ರಮಾಣದ ಮೊರೆ ಹೋಗಿದ್ದ ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ಕ್ಲಾಸ್ ತೆಗೆದುಕೊಂಡಿದೆ. ಆಗಿರುವ ಎಲ್ಲಾ ವೈಪಲ್ಯಕ್ಕೆ ರಾಜ್ಯ ನಾಯಕರ ನಿರ್ಲಕ್ಷವೇ ಕಾರಣ ಎಂದು ಹೈಕಮಾಂಡ್ ತರಾಟೆ ತೆಗೆದುಕೊಂಡಿದೆ ಎಂದು ಪ್ರತಿಷ್ಟಿತ ಮಾಧ್ಯಮಗಳು ವರದಿ ಮಾಡಿವೆ.
ರಾಜ್ಯ ಬಿಜೆಪಿಯ (Karnataka BJP) ಒಳಗಿನ ಅಡ್ಡಮತದಾನದ ರಾಜಕೀಯಕ್ಕೆ ಪವಿತ್ರ ಕ್ಷೇತ್ರ ಧರ್ಮಸ್ಥಳವನ್ನು (Dharmasthala) ಎಳೆದು ತರಲು ಹೊರಟಿದ್ದ ರಾಜ್ಯ ನಾಯಕರ ನಡೆಗೆ ಬಿಜೆಪಿ ಹೈಕಮಾಂಡ್ ರೆಡ್ ಸಿಗ್ನಲ್ ನೀಡಿದೆ. ಈ ಮೂಲಕ ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ನಡವಳಿಕೆ ಬಗ್ಗೆ ಕೇಂದ್ರ ನಾಯಕರು ಬೇಸರಗೊಂಡಿದ್ದಾರೆ. ಜೊತೆಗೆ ಪರಿಷತ್ ಚುನಾವಣೆಯಲ್ಲಿ ಆಗಿರುವ ವೈಫಲ್ಯಕ್ಕೆ ರಾಜ್ಯ ನಾಯಕರೇ ನೇರ ಕಾರಣ ಎಂದು ಆರೋಪಿಸಿರುವ ಹೈಕಮಾಂಡ್, ದೆಹಲಿಗೆ ತೆರಳಿರುವ ನಾಯಕರಿಗೆ ಕ್ಲಾಸ್ ತೆಗೆದುಕೊಂಡಿದೆ.
ಬೇಜವಬ್ದಾರಿಯಿಂದ ಪಕ್ಷಕ್ಕೆ ಇಂತಹ ಸ್ಥಿತಿ..!
ರಾಜ್ಯ ಬಿಜೆಪಿ ನಾಯಕರ ತಪ್ಪು ಮತ್ತು ವೈಫಲ್ಯದಿಂದಲೇ ರಾಜ್ಯದಲ್ಲಿ ಅಡ್ಡಮತದಾನ ಚಲಾವಣೆ ಆಯಿತು. ನಿಮಗೆ ಶಾಸಕರ ಮೇಲೆ ಯಾವುದೇ ಹಿಡಿತ ಇರಲಿಲ್ಲ, ಅವರ ಮೇಲೆ ಸರಿಯಾದ ನಿಗಾ ಇಡುವಲ್ಲಿಯೂ ನೀವು ಸಂಪೂರ್ಣವಾಗಿ ವಿಫಲರಾಗಿದ್ದೀರಿ. ಕಾಂಗ್ರೆಸ್ ನಾಯಕರು ಆಮಿಷ ಒಡ್ಡಿ ನಿಮ್ಮದೇ ಶಾಸಕರನ್ನು ಸೆಳೆಯಲು ಅವಕಾಶ ಮಾಡಿಕೊಟ್ಟಿದ್ದೇ ನಿಮ್ಮ ಬೇಜವಾಬ್ದಾರಿತನ ಎಂದು ವರಿಷ್ಠರು ರಾಜ್ಯ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಇದರ ಜೊತೆಗೆ ʻಧರ್ಮಸ್ಥಳಕ್ಕೆ ರಾಜಕೀಯವನ್ನು ಎಳೆದು ತಂದು ಪಕ್ಷಕ್ಕೆ ಮತ್ತಷ್ಟು ಮುಜುಗರ ತರಬೇಡಿ ಎಂದು ಎಚ್ಚರಿಸಿರುವ ಹೈಕಮಾಂಡ್, ಈಗಾಗಲೇ ಆಗಿರುವ ಎಡವಟ್ಟನ್ನು ಮೊದಲು ಸರಿಪಡಿಸುವುದು ಹೇಗೆ ಎಂಬುದರ ಕಡೆ ಗಮನಹರಿಸಿ. ಅದನ್ನು ಬಿಟ್ಟು ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡಿ ಮತ್ತೊಂದು ಹೊಸ ವಿವಾದ ಸೃಷ್ಟಿ ಮಾಡಬೇಡಿ ಎಂದು ರಾಜ್ಯ ನಾಯಕರಿಗೆ ಅತ್ಯಂತ ಕಠಿಣ ಪದಗಳಲ್ಲಿ ಸಂದೇಶ ರವಾನಿಸಿದೆ.