Search


ಸರ್ಕಾರಿ ಶಾಲೆಯಲ್ಲಿ ಓದಿರುವ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌ ; 7.5% ಮೀಸಲಾತಿ

ಬೆಂಗಳೂರು: ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆ ಹಾಗೂ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‌ಗಳ ಪ್ರವೇಶದಲ್ಲಿ ಶೇ.7.5ರಷ್ಟು ವಿಶೇಷ ಮೀಸಲಾತಿ ನೀಡಲು ರಾಜ್ಯ ಸರ್ಕಾರ ಕರಡು ನಿಯಮ ಪ್ರಕಟಿಸಿದೆ. ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಸರ್ಕಾರಿ ಸೀಟುಗಳ ಪ್ರವೇಶಕ್ಕಾಗಿ ಅಭ್ಯರ್ಥಿಗಳ ಆಯ್ಕೆ (ತಿದ್ದುಪಡಿ) ನಿಯಮಗಳು–2026ರ ಕರಡು ಅಧಿಸೂಚನೆಯನ್ನು ಹೊರಡಿಸಿರುವ ಸರ್ಕಾರ, ಈ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆ ಹಾಗೂ ಸಲಹೆಗಳನ್ನು ಆಹ್ವಾನಿಸಿದೆ.

ಇದುವರೆಗೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಒಟ್ಟಾರೆ ಶೇ.15ರಷ್ಟು ಮೀಸಲಾತಿ ನೀಡಲಾಗುತ್ತಿತ್ತು. ಹೊಸ ಕರಡು ನಿಯಮದ ಪ್ರಕಾರ ಈ ಮೀಸಲಾತಿಯನ್ನು ಎರಡು ವಿಭಾಗಗಳಾಗಿ ವಿಂಗಡಿಸಲು ಸರ್ಕಾರ ಮುಂದಾಗಿದೆ. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆ ಹಾಗೂ ಕಾಲೇಜುಗಳಲ್ಲಿ ಶಿಕ್ಷಣ ಪಡೆದ ಅರ್ಹ ವಿದ್ಯಾರ್ಥಿಗಳಿಗೆ ಶೇ.7.5ರಷ್ಟು ವಿಶೇಷ ಮೀಸಲಾತಿ ನೀಡುವ ಪ್ರಸ್ತಾಪ ಮಾಡಲಾಗಿದೆ.

ಉಳಿದ ಶೇ.7.5ರಷ್ಟು ಮೀಸಲಾತಿಯನ್ನು ಗ್ರಾಮೀಣ ಪ್ರದೇಶದಲ್ಲಿರುವ ಖಾಸಗಿ ಸೇರಿದಂತೆ ಇತರೆ ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿದ ಅರ್ಹ ಗ್ರಾಮೀಣ ಅಭ್ಯರ್ಥಿಗಳಿಗೆ ನೀಡಲಾಗುತ್ತದೆ. ಈ ಹೊಸ ನಿಯಮ ಜಾರಿಯಾದರೆ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಓದಿದ ಗ್ರಾಮೀಣ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣದ ಸರ್ಕಾರಿ ಸೀಟುಗಳ ಪ್ರವೇಶದಲ್ಲಿ ಹೆಚ್ಚಿನ ಅವಕಾಶ ದೊರೆಯುವ ನಿರೀಕ್ಷೆಯಿದೆ.

By Ravikumar - 07-09-2026


Ads in Post