ನವದೆಹಲಿ: ದೇಶದಲ್ಲಿ ಮುಂದಿನ ತಿಂಗಳುಗಳಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗುವ ಆತಂಕ ಎದುರಾಗಿದೆ. ಜಾಗತಿಕ ತಾಪಮಾನ ಏರಿಕೆ ಹಾಗೂ ‘ಸೂಪರ್ ಎಲ್ ನಿನೋ’ ಪರಿಣಾಮದಿಂದ ಸೆಪ್ಟೆಂಬರ್ನಿಂದ ಫೆಬ್ರವರಿವರೆಗೆ ಭಾರತದಲ್ಲಿ ತಾಪಮಾನ ಸಂಬಂಧಿತ ಸಾವುಗಳ ಸಂಖ್ಯೆ ಹೆಚ್ಚಾಗಬಹುದು ಎಂದು ಹೊಸ ಅಧ್ಯಯನ ಎಚ್ಚರಿಸಿದೆ. ಈ ಅವಧಿಯಲ್ಲಿ 15,800ಕ್ಕೂ ಹೆಚ್ಚು ಹೆಚ್ಚುವರಿ ಸಾವುಗಳು ಸಂಭವಿಸುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.
ಅಮೆರಿಕದ ಚಿಕಾಗೋ ವಿಶ್ವವಿದ್ಯಾಲಯದ ಎನರ್ಜಿ ಪಾಲಿಸಿ ಇನ್ಸ್ಟಿಟ್ಯೂಟ್ಗೆ ಸಂಬಂಧಿಸಿದ ಕ್ಲೈಮೇಟ್ ಇಂಪ್ಯಾಕ್ಟ್ ಲ್ಯಾಬ್ (CIL) ಈ ಅಧ್ಯಯನ ನಡೆಸಿದೆ. ಎಲ್ ನಿನೋ ಪರಿಣಾಮದಿಂದ ಹೆಚ್ಚು ಬಾಧಿತವಾಗಬಹುದಾದ ದೇಶಗಳ ಪಟ್ಟಿಯಲ್ಲಿ ನೈಜೀರಿಯಾ, ಇಂಡೋನೇಷ್ಯಾ ಮತ್ತು ಸುಡಾನ್ ಬಳಿಕ ಭಾರತ ನಾಲ್ಕನೇ ಸ್ಥಾನದಲ್ಲಿದೆ ಎಂದು ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ.
ಆಘಾತಕಾರಿ ಸಂಗತಿಯೆಂದರೆ, ಸಾವುಗಳ ಪೈಕಿ ಸುಮಾರು 7,400ಕ್ಕೂ ಹೆಚ್ಚು ಪ್ರಕರಣಗಳು ಡಿಸೆಂಬರ್ನಿಂದ ಫೆಬ್ರವರಿವರೆಗಿನ ಚಳಿಗಾಲದಲ್ಲೇ ಸಂಭವಿಸಬಹುದು ಎನ್ನಲಾಗಿದೆ. ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಚಳಿಗಾಲದಲ್ಲೂ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಇಲ್ಲಿ ಅಪಾಯ ಹೆಚ್ಚಿರಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.
ಇನ್ನು ಫೆಬ್ರವರಿ ಬಳಿಕ ಬೇಸಿಗೆ ಆರಂಭವಾಗುವುದರಿಂದ ಭಾರತ ಮತ್ತು ಪಾಕಿಸ್ತಾನದಲ್ಲಿ ಬಿಸಿಲಿನ ತೀವ್ರತೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಜಾಗತಿಕವಾಗಿ ಎಲ್ ನಿನೋ ಪರಿಣಾಮದಿಂದ ಸುಮಾರು 4.51 ಲಕ್ಷ ಸಾವುಗಳು ಸಂಭವಿಸುವ ಸಾಧ್ಯತೆ ಇದೆ ಎಂಬ ಅಂದಾಜನ್ನೂ ಅಧ್ಯಯನ ನೀಡಿದೆ. ಹೀಗಾಗಿ ಮುನ್ನೆಚ್ಚರಿಕೆಯಾಗಿ ಕುಡಿಯುವ ನೀರು, ಕೂಲಿಂಗ್ ಕೇಂದ್ರಗಳು, ಬಿಸಿಲಿನ ಮುನ್ನೆಚ್ಚರಿಕೆ ವ್ಯವಸ್ಥೆ ಹಾಗೂ ಹೊರಾಂಗಣ ಕಾರ್ಮಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ವರದಿ ಸಲಹೆ ನೀಡಿದೆ.