ಉತ್ತರಖಂಡ್ : ಮಹಿಳೆಯೊಬ್ಬರು ಸ್ಕೂಟಿಯಲ್ಲಿ ಆನೆಗೆ ಡಿಕ್ಕಿ ಹೊಡೆದು, ಆನೆಯ ದಂತ ಮುರಿದು ಹಾಕಿರುವ ಘಟನೆ ಉತ್ತರಖಂಡ್‌ನ ಖತಿಮಾ ಎಂಬಲ್ಲಿ ನಡೆದಿದೆ. ಡಿಕ್ಕಿಯ ರಭಸಕ್ಕೆ ಆನೆಯ ದಂತ ಮೂರ್ನಾಲ್ಕು ತುಂಡುಗಳಾಗಿದ್ದು, ಆನೆ ನೋವಿನಿಂದ ಕಾಡಿನ ಒಳಗೆ ಓಡಿ ಹೋಗಿದೆ. ಈ ಕುರಿತಾದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು. ಅರಣ್ಯ ಇಲಾಖೆ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡುವಂತೆ ಮನವಿ ಮಾಡಿದೆ.
ಒಂದು ಕಾಲದಲ್ಲಿ ಅಡುಗೆ ಮನೆಗೆ ಸೀಮಿತವಾಗಿದ್ದ ಸ್ತ್ರೀಯರು, ಇಂದು ಎಲ್ಲಾ ಕ್ಷೇತ್ರಗಳಲ್ಲು ಸಾಧನೆ ಮಾಡುತ್ತಿದ್ದಾರೆ, ಯುದ್ದ ವಿಮಾನದಿಂದ ಹಿಡಿದು ಬಾಹ್ಯಕಾಶದವರೆಗೂ ಅವರು ಮುಟ್ಟದ ಸ್ಥಳವೇ ಇಲ್ಲ. ಹೀಗಿರುವಾಗಲೂ ಕೂಡ ಮಹಿಳೆಯರು ಸ್ಕೂಟಿ ಓಡಿಸುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗುತ್ತಿರುತ್ತವೆ. ಈ ಚರ್ಚೆಗೆ ಈಗ ಮತ್ತೊಂದು ಸೇರ್ಪಡೆಯಾಗಿದ್ದು. ಉತ್ತರಖಂಡ್‌ನಲ್ಲಿ ಮಹಿಳಾ ಶಿಕ್ಷಕಿಯೊಬ್ಬರು. ತಮ್ಮ ಸ್ಕೂಟಿಯಲ್ಲಿ ಆನೆಗೆ ಡಿಕ್ಕಿ ಹೊಡೆದು, ಅದರ ದಂತ ಮುರಿದು, ದೇಶದ ಗಮನ ಸೆಳೆದಿದ್ದಾರೆ.
ಆನೆ ಕಂಡು ಗಾಬರಿ... ನಿಯಂತ್ರಣ ತಪ್ಪಿ ಡಿಕ್ಕಿ...!
ಉತ್ತರಾಖಂಡ್‌ನ ಖತಿಮಾ ಎಂಬಲ್ಲಿ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ‘ಹಿಂದ್ ಪಬ್ಲಿಕ್ ಸ್ಕೂಲ್’ನ ಶಿಕ್ಷಕಿ ನಿಕಿತಾ ಕಪ್ರಿ ಎಂಬುವವರು, ತನಕ್ಪುರದಲ್ಲಿದ್ದ ತಮ್ಮ ತಾಯಿಯ ಸಂಬಂಧಿಕರ ಮನೆಗೆ ಹೋಗಿ, ಮಂಗಳವಾರ ಬೆಳಿಗ್ಗೆ (ಮೇ 19) ಸ್ಕೂಟರ್‌ನಲ್ಲಿ ವಾಪಸ್ ಬರುತ್ತಿದ್ದರು. ಈ ವೇಳೆ ಬನ್ಬಾಸಾ ಮತ್ತು ಚಕರ್ಪುರ ನಡುವಿನ ದಟ್ಟ ಅರಣ್ಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದಾಗ, ಆನೆಯೊಂದು ಇದ್ದಕ್ಕಿದ್ದಂತೆ ರಸ್ತೆಗೆ ಬಂದಿದೆ. ಹಠಾತ್ ಆನೆಯನ್ನು ಕಂಡು ಗಾಬರಿಗೊಂಡ ಶಿಕ್ಷಕಿ, ಸ್ಕೂಟರ್ ನಿಯಂತ್ರಣ ಸಿಗದೆ ನೇರವಾಗಿ ಆನೆಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ರಭಸಕ್ಕೆ ಆನೆಯ ದಂತ ಮುರಿದಿದ್ದು. ಗಾಬರಿಗೊಂಡ ಆನೆ ನೋವಿನಿಂದ ಕಾಡಿನ ಒಳಗೆ ಓಡಿ ಹೋಗಿದೆ.
ಅಪಘಾತದ ತೀವ್ರತೆಗೆ ಶಿಕ್ಷಕಿ ನಿಕಿತಾ ಅವರಿಗೂ ಗಂಭೀರ ಗಾಯಗಳಾಗಿದ್ದು, ಮಾಹಿತಿ ಪಡೆದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇತ್ತ ಘಟನಾ ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಅಧಿಕಾರಿಗಳು ಹೆದ್ದಾರಿಯಲ್ಲಿ ಬಿದ್ದಿದ್ದ ಆನೆಯ ಮುರಿದ ದಂತವನ್ನು ವಶಕ್ಕೆ ಪಡೆದು ಕಚೇರಿಯಲ್ಲಿ ಸುರಕ್ಷಿತವಾಗಿಟ್ಟಿದ್ದಾರೆ. ದಂತ ಮುರಿದುಕೊಂಡು ನೋವಿನಿಂದ ಕಾಡಿಗೆ ಓಡಿರುವ ಆನೆಯ ಆರೋಗ್ಯದ ಮೇಲೆ ನಿಗಾ ಇಡಲು ಅರಣ್ಯ ಸಿಬ್ಬಂದಿ ಕಾಡಿನೊಳಗೆ ಎರಡು ‘ಟ್ರ್ಯಾಪ್ ಕ್ಯಾಮೆರಾ’ಗಳನ್ನು (Trap Cameras) ಅಳವಡಿಸಿದ್ದಾರೆ. ಸದ್ಯ ಈ ಅಪಘಾತದ ನಂತರದ ಭೀಕರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅರಣ್ಯ ವ್ಯಾಪ್ತಿಯ ಹೆದ್ದಾರಿಗಳಲ್ಲಿ ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಚಾಲಕರಿಗೆ ಮನವಿ ಮಾಡಲಾಗಿದೆ.