ನೆಲಮಂಗಲ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ನೆಲಮಂಗಲ ತಾಲೂಕಿನ ಸುಪ್ರಸಿದ್ಧ ಮಹಿಮಾ ರಂಗನಾಥ ಬೆಟ್ಟದಲ್ಲಿ ಮರಗಳ ಮಾರಣ ಹೋಮ ನಡೆಯುತ್ತಿದೆ. ಅನಾವಶ್ಯಕ ಕಾಮಗಾರಿಯ ನೆಪದಲ್ಲಿ ನೂರಾರು ಮರಗಳನ್ನ ಕಡಿದು ನಾಶ ಮಾಡುತ್ತಿದ್ದು, ಹತ್ತಾರು ವರ್ಷಗಳಿಂದ ಬೆಟ್ಟದಲ್ಲಿ ಗಿಡ ನೆಟ್ಟು ಪೋಷಿಸಿ, ಬೆಳೆಸಿದ್ದ ಪರಿಸರ ಪ್ರೇಮಿಗಳು, ಕಾಮಗಾರಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡದಲ್ಲಿ ಒಂದು ಜನಪ್ರಿಯ ಗಾದೆ ಇದೆ "ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ" ಎಂದು, ಅದೇ ರೀತಿ ಗಿಡ-ಮರಗಳು ಕೂಡ. ಒಂದು ಸಸಿಯನ್ನ ನೆಟ್ಟು, ಅದನ್ನ ಪೋಷಿಸಿ ಮರವಾಗಿಸುವ ವೇಳೆಗೆ ಒಂದು ತಲೆಮಾರು ಅಳಿವಿನಂಚಿಗೆ ಬಂದಿರುತ್ತದೆ. ಆದರೆ ಆ ಮರಗಳನ್ನ ಕೇವಲ ನಿಮಿಷದಲ್ಲಿ ಉರುಳಿಸಿ ನೆಲಸಮ ಮಾಡಬಹುದು. ಅದೇ ರೀತಿ ಇದೀಗ ನೆಲಮಂಗಲದ ಪ್ರಸಿದ್ದ ಮಹಿಮಾ ರಂಗನಾಥ ಬೆಟ್ಟದಲ್ಲಿ ಪರಿಸರ ಪ್ರೇಮಿಗಳು ಕಳೆದ ಅನೇಕ ವರ್ಷಗಳಿಂದ ಪೋಷಿಸಿ ಬೆಳೆಸಿದ್ದ ಗಿಡ-ಮರಗಳನ್ನ ಅಭಿವೃದ್ದಿ ಹೆಸರಲ್ಲಿ ನಾಶ ಮಾಡಲಾಗಿದೆ.
ರಸ್ತೆಯೂ ಇದೆ... ಮೆಟ್ಟಿಲೂ ಇದೆ... ; ಆದರೂ ಈ ಅನಾವಶ್ಯಕ ಕಾಮಗಾರಿಯೇಕೆ..!
ಮಹಿಮಾ ರಂಗನಾಥ ಬೆಟ್ಟದ ಮೇಲೆ ಚೋಳ ಶೈಲಿಯ ರಂಗನಾಥ ಸ್ವಾಮಿ ದೇವಾಲಯವಿದ್ದು, ದೇವಾಲಯಕ್ಕೆ ಕಾಲ್ನಡಿಗೆ ಮೂಲಕ ತೆರಳಲು ಸುಸಜ್ಜಿತವಾದ ಮೆಟ್ಟಿಲುಗಳ ವ್ಯವಸ್ಥೆಯಿದೆ, ವಾಹನಗಳ ಮೂಲಕ ಬೆಟ್ಟದ ಮೇಲೆ ತೆರಳಲು ರಸ್ತೆಯನ್ನು ನಿರ್ಮಿಸಿಲಾಗಿದೆ, ಆದರೆ ಇಷ್ಟೆಲ್ಲಾ ಇದ್ದರು ಕೂಡ ಇತ್ತೀಚೆಗೆ ಅಭಿವೃದ್ದಿ ಹೆಸರಿನಲ್ಲಿ ಜೆಸಿಬಿಗಳು ಘರ್ಜಿಸುತ್ತಿದ್ದು. ಹತ್ತಾರು ವರ್ಷಗಳಿಂದ ಪರಿಸರ ಪ್ರೇಮಿಗಳು ನೆಟ್ಟು ಬೆಳೆಸಿದ್ದ ನೂರಾರು ಗಿಡ-ಮರಗಳು ನಾಶವಾಗಿವೆ, ಈಗಾಗಲೇ ಈ ಕಾಮಗಾರಿಯಿಂದ ಬೆಟ್ಟದ ಸ್ವರೂಪ ಬದಲಾಗಿದ್ದು. ಇದರಿಂದಾಗಿ ಬೆಟ್ಟದಲ್ಲಿ ಮಣ್ಣು ಕುಸಿಯುವ ಆತಂಕ ಶುರುವಾಗಿದೆ.
ಇನ್ನು ಈ ಕುರಿತು ನೆಲಮಂಗಲ ತಾಲೂಕು pwd Aee ಹರೀಶ್ ಅವರ ಬಳಿ ಪ್ರಶ್ನೆ ಮಾಡಿದರೆ, "ಅಭಿವೃದ್ದಿಗಾಗಿ ನಾಶ ಮಾಡಲೇಬೇಕಾಗುತ್ತದೆ" ಎಂದು ಹಾರಿಕೆ ಉತ್ತರ ಕೊಡುತ್ತಿದ್ದಾರೆ. ಬೆಟ್ಟದಲ್ಲಿ ನಡೆಯುತ್ತಿರುವ ಈ ಕಾಮಗಾರಿಯ ಬಗ್ಗೆ ಈಗಾಗಲೇ ಅರಣ್ಯ ಸಚಿವರ ಗಮನಕ್ಕೆ ತರಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ದ ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ.