2ಸಾವಿರ ಕೋಟಿಯ ಒಡೆಯನಾದ್ರೂ ಆತನಿಗೆ ಗೆ ನೆಮ್ಮದಿ ಇಲ್ಲ ಯಾಕೆ..?ಆಸ್ಪತ್ರೆಯ ಬೆಡ್ ನಲ್ಲಿ ಕುಳಿತು ಕಣ್ಣೀರು ಹಾಕಿದ್ದೇಕೆ..? ನಿನಗೆ ಇನ್ನು ಮುಂದೆ ನಡೆಯಲು ಆಗಲ್ಲ ಎಂದ ಡಾಕ್ಟರ್ ಅವನು ಮಾಡಿದ್ದೇನು ಗೊತ್ತಾ?
ಫುಟ್ಬಾಲ್ ಜಗತ್ತಿನಲ್ಲಿ ಇತಿಹಾಸವನ್ನ ಬರೆದವರಿದ್ದಾರೆ. ಸಾಮ್ರಾಜ್ಯವನ್ನು ಕಟ್ಟಿದವರಿದ್ದಾರೆ. ಆದ್ರೆ ಸಾವು ಬದುಕಿನ ಆಟದಲ್ಲಿ ಒಂದಲ್ಲ ಎರಡಲ್ಲ.. ನಾಲ್ಕು ಬಾರಿ ಯಮರಾಯನಿಗೆ ಬೆನ್ನು ತೋರಿಸಿ, ಫುಟ್ಬಾಲ್ ಮೈದಾನದಲ್ಲಿ ಚರಿತ್ರೆ ಬರೆದ ಏಕೈಕ ಮೃತ್ಯುಂಜಯ ಮಾತ್ರ ಒಬ್ಬನೇ ಒಬ್ಬ.
ವಿಧಿಯ ಬರಹ ಎಷ್ಟು ವಿಚಿತ್ರ ನೋಡಿ. ಕೇವಲ ನಾಲ್ಕು ತಿಂಗಳ ಹಸುಗೂಸಾಗಿದ್ದಾಗಲೇ ಭೀಕರ ಕಾರು ಅಪಘಾತದಲ್ಲಿ ಜೀವ ಉಳಿಸಿಕೊಂಡಿದ್ದ. ಬಾಲ್ಯದಲ್ಲಿ ಕಣ್ಣಿನ ನರ ದೋಷದಿಂದ ಮೆದುಳಿನ ರಕ್ತಸ್ರಾವ ಆಗುವ ಭೀತಿಯಿಂದಲೂ ಪಾರಾಗಿದ್ದ. ಮೈದಾನದಲ್ಲಿ ಬೆನ್ನುಮೂಳೆಗೆ ಏಟು ಬಿದ್ದು ಸಾವಿನ ದವಡೆಗೆ ಸಿಲುಕಿ ಮತ್ತೆ ಫಿನಿಕ್ಸ್ನಂತೆ ಎದ್ದು ಬಂದಿದ್ದ. ಆಗಸದಲ್ಲಿ ವಿಮಾನ ಹಾರಾಟ ಮಾಡುತ್ತಿದ್ದಾಗ ಬೇಟೆಯಾಡಲು ಬಂದ ಯಮನನ್ನೇ ಡ್ರಿಬಲ್ ಮಾಡಿ ಪ್ರಾಣಾಪಾಯದಿಂದ ಬದುಕುಳಿದಿದ್ದ.
ಈತನ ಹೆಸರು ನೇಮರ್ ಡಿ ಸಿಲ್ವಾ ಸ್ಯಾಂಟೋಸ್ ಜ್ಯೂನಿಯರ್.
ತಾನು ವೃತ್ತಿಪರ ಫುಟ್ಬಾಲ್ ಆಟಗಾರನಾಗಿಲ್ಲ. ಆದ್ರೆ ತನ್ನ ಮಗ ಅದ್ಭುತ ಆಟಗಾರನಾಗಬೇಕು ಎಂದು ಕನಸು ಕಾಣುತ್ತಿದ್ದ ತಂದೆ. ಇದಕ್ಕಾಗಿ ಕಾಲು ನೋವನ್ನು ಸಹಿಸಿಕೊಂಡು ಹಗಲಿರುವ ದುಡಿಯುತ್ತಿದ್ದ ಸೀನಿಯರ್ ನೇಮರ್. ಮಗನ ಫುಟ್ಬಾಲ್ ಪ್ರೀತಿಗೆ ಸರ್ವಸ್ವವನ್ನು ತ್ಯಾಗ ಮಾಡಿದ್ದ ತಾಯಿ. ಅಣ್ಣ ಫುಟ್ಬಾಲ್ ಆಟಗಾರನಾಗಬೇಕು ಎಂದು ಸ್ಪೂರ್ತಿ ತುಂಬುತ್ತಿದ್ದ ಸಹೋದರಿಯರು. ಫುಟ್ಬಾಲ್ ಆಟವೇ ತನ್ನ ಬಾಳಿನ ಬೆಳಕು ಅಂದುಕೊಂಡಿದ್ದ ನೇಮರ್ ಜ್ಯೂನಿಯರ್. ಇಂತಹ ವಾತಾವರಣದಲ್ಲಿ ಬೆಳೆದಿದ್ದ ನೇಮರ್, ವಿಶ್ವದ ಶ್ರೀಮಂತ ಫುಟ್ಬಾಲ್ ಆಟಗಾರನಾಗುತ್ತಾನೆ ಅಂತ ಯಾರು ಕೂಡ ಅಂದುಕೊಂಡಿರಲಿಲ್ಲ.
ಹೌದು, ಬಾಲಕ ನೇಮರ್ಗೆ ಫುಟ್ಬಾಲ್ ಆಟದ ಮೇಲೆ ಎಲ್ಲಿಲ್ಲದ ಪ್ರೀತಿ. ಮನೆಯೊಳಗೆ ಸುಮಾರು 50ಕ್ಕೂ ಹೆಚ್ಚು ಕಾಲ್ವೆಂಡುಗಳು ರಾಶಿಬಿದ್ದಿದ್ದವು. ಆದ್ರೆ ಯಾವುದು ಕೂಡ ದುಡ್ಡು ಕೊಟ್ಟು ತಂದಿರುವ ಚೆಂಡುಗಳಾಗಿರಲಿಲ್ಲ. ಮನೆಯ ಪಕ್ಕದಲೇ ಡಂಪಿಂಗ್ ಯಾರ್ಡ್ ಇದ್ದುದರಿಂದ ಕಸದ ರಾಶಿಯಲ್ಲಿ ಸಿಕ್ಕ ಚೆಂಡುಗಳನ್ನು ಕ್ಲೀನ್ ಮಾಡಿ ಮನೆಯೊಳಗೆ ತರುತ್ತಿದ್ದ. ಟೇಬಲ್, ಕುರ್ಚಿಯನ್ನು ಡಿಫೆÉಂಡರ್ಗಳು ಅಂತ ತಿಳಿದುಕೊಂಡು ಚೆಂಡಿನ ಜೊತೆ ಸರಸವಾಡುತ್ತಿದ್ದ.
ಅಂದ ಹಾಗೇ ನೇಮರ್ಗೆÉ ಆಗ ಸುಮಾರು ಆರೇಳು ವರ್ಷ. ಮನೆಯ ಪಕ್ಕದ ಕ್ರೀಡಾಂಗಣದಲ್ಲಿ ಫುಟ್ಬಾಲ್ ಪಂದ್ಯವೊಂದು ನಡೆಯುತ್ತಿತ್ತು. ಆಗ ನೇಮರ್ ತಂದೆಯ ಜೊತೆ ಆ ಪಂದ್ಯವನ್ನು ನೋಡಲು ಹೋಗಿದ್ದ. ಆದ್ರೆ ಪಂದ್ಯ ನೋಡುವ ಬದಲು ಬಾಲಕ ನೇಮರ್ ಫುಟ್ಬಾಲ್ ಅಂಗಣದ ಮೆಟ್ಟಿಲುಗಳಲ್ಲಿ ವೇಗವಾಗಿ ಓಡಾಡುತ್ತಿದ್ದ. ಥೇಟ್ ಫುಟ್ಬಾಲ್ ಆಡುವ ಶೈಲಿಯಲ್ಲೆ ಮೆಟ್ಟಿಲುಗಳ ನಡುವೆ ಕರಾಮತ್ತು ತೋರಿಸುತ್ತಿದ್ದ. ಇದನ್ನು ನೋಡಿದ್ದ ಕೋಚ್ ಬೆಟಿನ್ಹೋ, ಈ ಹುಡುಗನಲ್ಲಿ ಆಗಾಧವಾದ ಪ್ರತಿಭೆ ಇದೆ. ಈತ ಬ್ರೆಜಿಲ್ನ ಮತ್ತೊಬ್ಬ ರೋಬಿನ್ಹೋ ಆಗ್ತಾನೆ ಅಂತ ಮನಸ್ಸಲ್ಲಿ ಅಂದುಕೊಂಡಿದ್ದರು. ತಡ ಮಾಡದೇ ನೇಮರ್ ತಂದೆಯನ್ನು ಭೇಟಿ ಮಾಡಿ ಈ ಹುಡುಗನನ್ನು ನನಗೆ ಕೊಟ್ಟು ಬಿಡಿ. ಈತನ ಸಂಪೂರ್ಣ ಜವಾಬ್ದಾರಿ ನನ್ನದು ಅಂತ ಭರವಸೆ ನೀಡಿದ್ದರು.
ಹಾಗೇ ನೇಮರ್ಗೆ ಸಾವೋ ವಿಸೆಂಟಿ ಎಂಬ ಇಂಡೋರ್ ಫುಟ್ಬಾಲ್ ಕ್ಲಬ್ನಲ್ಲಿ ಬೆಟಿನ್ಹೋ ತರಬೇತಿ ನೀಡಲು ಶುರು ಮಾಡಿದ್ದರು. ಪಾದರಸದಂತೆ ವೇಗವಾಗಿ ಓಡಾಡುತ್ತಿದ್ದ ನೇಮರ್ ಕಾಲಿನ ಚಲನೆ, ಆಟದ ಕೌಶಲ್ಯದಿಂದಲೇ ಎಲ್ಲರ ಗಮನ ಸೆಳೆದಿದ್ದ. ತನ್ನ ಅದ್ಬುತ ಆಟದಿಂದ ಕ್ಲಬ್ನ ಮನಗೆದ್ದ ನೇಮರ್ ತನ್ನ 12ನೇ ವಯಸ್ಸಿನಲ್ಲೇ 20ಸಾವಿರ ರಿಯಲ್ಸ್ ಹಣ ಪಡೆಯುತ್ತಿದ್ದ. ಅಪ್ಪಟ ಪ್ರತಿಭೆ ಕೊಳಗೇರಿಯ ಬೀದಿಯಲ್ಲಿ ವಾಸ ಮಾಡಬಾರದು ಅಂತ ಸ್ಯಾಂಟೋಸ್ ಕ್ಲಬ್ ನೇಮರ್ ಕುಟಂಬಕ್ಕೆ ಅಪಾರ್ಟ್ಮೆಂಟ್ ಅನ್ನು ಉಡುಗೊರೆಯಾಗಿ ನೀಡಿತ್ತು. ಹೀಗೆ ನೇಮರ್ ಜ್ಯೂನಿಯರ್ ತನ್ನ 12ನೇ ಹರೆಯದಲ್ಲೇ ಅಪ್ಪ ಅಮ್ಮ, ಸಹೋದರಿಯರಿಗೆ ಸುಂದರವಾದ ಸೂರನ್ನು ಕಲ್ಪಿಸಿಕೊಟ್ಟಿದ್ದ. ನಂತರ ನೇಮರ್ ಹಿಂತಿರುಗಿ ನೋಡಿದ್ದೇ ಇಲ್ಲ. .
ತನ್ನ 14ರ ಹರೆಯದಲ್ಲೇ ನೇಮರ್ಗೆ ಸ್ಪೇನ್ನ ಪ್ರತಿಷ್ಠಿತ ರಿಯಾಲ್ ಮ್ಯಾಡ್ರಿಡ್ ಕ್ಲಬ್ ಗಾಳ ಹಾಕಿತ್ತು. ಡೇವಿಡ್ ಬೆಕಮ್, ರೋನಾಲ್ಡೊ, ರಾರ್ಬಟ್ ಕಾರ್ಲೋಸ್ನಂತಹ ಆಟಗಾರರು ಆಡುತ್ತಿದ್ದರೂ ನೇಮರ್, ರಿಯಲ್ ಮ್ಯಾಡ್ರಿಡ್ನ ಒಪ್ಪಂದವನ್ನು ತಿರಸ್ಕರಿಸಿದ್ದ. ಕೋಟಿ ಕೋಟಿ ದುಡ್ಡು ಕೊಟ್ರು ತನ್ನ ಹೆತ್ತವರನ್ನು ಬಿಟ್ಟು ಹೋಗಲ್ಲ ಅಂತ ಹಠ ಹಿಡಿದಿದ್ದ. ಅದರಲ್ಲೂ ತನ್ನ ತಂಗಿ ರಫೆಲ್ಲಾಳನ್ನು ಬಿಟ್ಟು ಹೋಗಲು ಮನಸ್ಸು ಇರಲಿಲ್ಲ. ಮಗನ ಸಂತೋಷಕ್ಕಿಂತ ದುಡ್ಡು ಮುಖ್ಯವಲ್ಲ ಅಂತ ಸೀನಿಯರ್ ನೇಮರ್ ಕೂಡ ಸುಮ್ಮನಾಗಿದ್ದ. . ಬಳಿಕ ನೇಮರ್ 2013ರಲ್ಲಿ ಬಾರ್ಸಿಲೋನಾ ತಂಡವನ್ನು ಸೇರಿಕೊಂಡಿದ್ದ. ಬಳಿಕ ಪಿಎಸ್ಜಿ ತಂಡದ ಪರ ಆಡಿದ್ದ ನೇಮರ್ ಈಗ ಸೌದಿಯ ಅಲ್ ಹಿಲಾಲ್ ತಂಡದ ದುಬಾರಿ ಬೆಲೆಯ ಆಟಗಾರನಾಗಿದ್ದಾನೆ.
ನಿಜ, ನೇಮರ್ ಆಟ ಅಂದ್ರೆ ಅದು ಮೈದಾನದಲ್ಲಿ ಚೆಂಡಿನ ಜೊತೆ ನಡೆಯುವ ನೃತ್ಯ ಪ್ರದರ್ಶನ. ಬ್ರೆಜಿಲ್ನ ಸಾಂಬಾ ಡಾನ್ಸ್ ಅನ್ನು ನೇಮರ್ ಆಟದಲ್ಲಿ ಸವಿಯಬಹುದು. ಬ್ರೆಜಿಲ್ನ ಜಿಂಗಾ ಶೈಲಿಯ ಆಟ ನೇಮರ್ ರಕ್ತದಲ್ಲೆ ಇತ್ತು. ಎದುರಾಳಿಯ ತಲೆಯ ಮೇಲಿಂದ ಚೆಂಡನ್ನು ಹಾರಿಸುವ ರೇನ್ ಬೋ ಫ್ಲಿಕ್ಸ್ ಮತ್ತು ಎದುರಾಳಿ ಆಟಗಾರರ ಕಣ್ಣುಗಳನ್ನು ಮಬ್ಬುಗೊಳಿಸುವ ಸ್ಟೆಪ್ ಓವರ್ ನೈಪುಣ್ಯತೆಗಳು ನೇಮರ್ ಆಟದ ಸಿಗ್ನೆಚರ್ ಸ್ಟೈಲ್. ನೇಮರ್, ಮೆಸ್ಸಿ ರೀತಿ ಚೆಂಡನ್ನು ಕಾಲಿಗೆ ಅಂಟಿಕೊಂಡು ಆಡಲ್ಲ. ರೊನಾಲ್ಡೊನಂತೆ ಆಕ್ರಮಣಕಾರಿಯಾಗಿ ಆಡಲ್ಲ. ಆದ್ರೆ ನೇಮರ್ ಒಬ್ಬ ಪರಿಪೂರ್ಣ ಕಲಾವಿದನಂತೆ ಆಡ್ತಾನೆ. ಜೊತೆಗೆ ಅದ್ಭುತ ಪ್ಲೇ ಮೇಕರ್ ಕೂಡ ಹೌದು.
ನೇಮರ್ನ ಅಹಂಕಾರವನ್ನು ಕರಗಿಸಿದ ತಾಯಿಯ ಕಣ್ಣೀರು.
ಸಣ್ಣ ವಯಸ್ಸಿನಲ್ಲೇ ನಿರೀಕ್ಷೆಗಿಂತ ಯಶಸ್ಸು ಸಾಧನೆ ಮಾಡಿದಾಗ ಸಹಜವಾಗಿ ಅಹಂ ತಲೆಗೆರುತ್ತದೆ. ಹಾಗೇ, ನೇಮರ್ ಕೂಡ. ಹದಿಹರೆಯದಲ್ಲೇ ನೇಮ್ - ಫೇಮ್ ಬಂದಾಗ ನೇಮರ್ ವರ್ತನೆಯಲ್ಲೂ ಬದಲಾವಣೆಯಾಯ್ತು. ಈ ನಡುವೆ, ಮೈದಾನದಲ್ಲೇ ರೆಫ್ರಿ ಜೊತೆ ಗಲಾಟೆ ಕೂಡ ಮಾಡಿಕೊಂಡಿದ್ದ. ಮೈದಾನದಲ್ಲಿ ಆಟಗಾರನನ್ನಲ್ಲ. ರಾಕ್ಷಸನನ್ನು ಸಾಕುತ್ತಿದ್ದೇವೆ ಎಂದು ಮಾಧ್ಯಮಗಳು ಟೀಕೆ ಮಾಡಿದ್ದವು. ಆದ್ರೂ ಅಹಂಕಾರದಿಂದ ಬೀಗುತ್ತಾ ಮನೆಗೆ ಬಂದಿದ್ದ ನೇಮರ್ನನ್ನು ಹೆಬ್ಬಾಗಿಲಿನಲ್ಲೆ ತಾಯಿ ತಡೆದು ನಿಲ್ಲಿಸಿದ್ದಳು. ನಾನು ಸಾಕಿ ಬೆಳೆಸಿದ್ದ ಮುಗ್ದ ಮಗ ನೀನಲ್ಲ. ನಿನಗೆ ನಾನು ಇಂತಹ ಸಂಸ್ಕಾರವನ್ನು ಕಲಿಸಿಲ್ಲ ಎಂದು ಕಣ್ಣೀರು ಹಾಕುತ್ತಾ ಬೈದಿದ್ದಳು. ತಾಯಿಯ ಕಣ್ಣೀರಿನ ಮಾತು ನೇಮರ್ನ ಮನಸ್ಸನ್ನೆ ಬದಲಾಯಿಸಿಬಿಟ್ಟಿತ್ತು.
ನೇಮರ್ ಮತ್ತು ಅವಳು ಹಾಗೂ ಮತ್ತೊಬ್ಬಳು..!
ಅಧಿಕೃತವಾಗಿ ನೇಮರ್ ಯಾರನ್ನು ಇನ್ನೂ ಮದುವೆಯಾಗಿಲ್ಲ. ಆದ್ರೂ ಇಬ್ರೂ ಗೆಳತಿಯರಿದ್ದಾರೆ. ಮೂವರು ಮಕ್ಕಳಿದ್ದಾರೆ. 19ನೇ ಹರೆಯದಲ್ಲೆ ಅಪ್ಪನಾಗಿದ್ದ ನೇಮರ್, ಗೆಳತಿ ಕೆರೊಲಿನಾ ಜೊತೆ ಸಂಬಂಧವನ್ನು ಮುರಿದುಕೊಂಡಿದ್ದ. ಆದ್ರೆ ಅಪ್ಪನಾಗಿ ಮಗ ಡೇವಿಡ್ ಲ್ಯೂಕಾಸ್ನ ಸಂಪೂರ್ಣ ಜವಾಬ್ದಾರಿಯನ್ನು ತಾನೇ ವಹಿಸಿಕೊಂಡಿದ್ದಾನೆ. ಅಲ್ಲದೆ ಸೀರಿಯಲ್ ನಟಿ ಬ್ರೂನಾ ಜೊತೆಗೂ ಸಂಬಂಧವನ್ನಿಟ್ಟುಕೊಂಡಿದ್ದಾನೆ. ಆಕೆಗೆ ಇಬ್ಬರು ಪುತ್ರಿಯರಿದ್ದಾರೆ. ಇನ್ನೊಂದೆಡೆ ತಂಗಿ ರಾಫೆಲ್ಲಾಳನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದಾನೆ. ತಂಗಿಯ ಮುಖವನ್ನು ಕೈಯ ಮೆಲೆ ಹಚ್ಚೆ ಹಾಕಿಸಿಕೊಂಡಿದ್ದ. ಹಾಗೇ ತಂಗಿ ಅಣ್ಣನ ಕಣ್ಣುಗಳನ್ನು ತೋಳಿನ ಮೇಲೆ ಟ್ಯಾಟ್ ಹಾಕಿಸಿಕೊಂಡಿದ್ದಾಳೆ.
ವಿಲಾಸಿ ಜೀವನದ ನಡುವೆಯೂ ನೇಮರ್ ದೈವಭಕ್ತ..!
ಐಶಾರಾಮಿ ಜೀವನ ಸಾಗಿಸುತ್ತಿದ್ರೂ ನೇಮರ್ ದೇವರ ಮೇಲೆ ಅಪಾರವದ ನಂಬಿಕೆಯನ್ನಿಟ್ಟುಕೊಂಡಿದ್ದಾನೆ. 16ರ ಹರೆಯದಲ್ಲೆ ಬ್ಯಾಪಿಸ್ಟ್ ಚರ್ಚ್ನಲ್ಲಿ ದೀಕ್ಷೆ ಪಡೆದ ನೇಮರ್ಗೆ. ಏಸುವಿನ ಸೇವೆ ಮಾಡುವುದರಿಂದ ಮಾತ್ರ ಬದುಕಿಗೆ ಅರ್ಥ ಸಿಗುತ್ತದೆ ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲ, ನೇಮರ್ ತನ್ನ ಗಳಿಕೆಯ 10ರಷ್ಟು ಹಣವನ್ನು ಚರ್ಚ್ಗಳಿಗೆ ದೇಣಿಗೆ ನೀಡುತ್ತಿದ್ದಾನೆ.
ನೇಮರ್ ಬದುಕು ಕತ್ತಲ ಕೋಣೆಯೊಳಗಿನ ಪ್ರಕಾಶಮಾನವಾದ ಬೆಳಕಿನ ಆಟ..!
ನೇಮರ್ ಫುಟ್ಬಾಲ್ ಮೈದಾನದಲ್ಲಿ ಅದ್ಭುತ ಜಾದುಗಾರ. ಆತನ ಆಟ ನೋಡಲು ಎಷ್ಟು ಸುಂದರವಾಗಿದೆಯೋ, ಆತನ ಮೈಯಲ್ಲಿ ಅಷ್ಟೇ ಕೋಪದ ಜ್ವಾಲಮುಖಿಯೂ ಇದೆ. ಮೈದಾನದಲ್ಲಿ ಡಿಫೆಂಡರ್ಗಳನ್ನು ಮುರ್ಖರಾನ್ನಾಗಿಸುವ ನೇಮರ್, ಮೈದಾನದಲ್ಲಿ ತನ್ನ ಮುರ್ಖತನದ ಬುದ್ದಿಯಿಂದಲೂ ವಿವಾದದ ಬಲೆಯೊಳಗೆ ಸಿಲುಕಿಕೊಳ್ಳುತ್ತಿದ್ದಾನೆ. ಲೈಂಗಿಕ ದೌರ್ಜನ್ಯ ಕೇಸ್, ಕರೋನಾ ಟೈಮ್ನಲ್ಲಿ ಪಾರ್ಟಿ, ವರ್ಣಭೇದ ನೀತಿಯ ಜಗಳ, ಮನೆ ನಿರ್ಮಾಣ ವಿಚಾರದಲ್ಲಿ ಪರಿಸರ ನಿಯಮ ಉಲ್ಲಂಘನೆÉ ಕೂಡ ಮಾಡಿದ್ದಾನೆ. 2022ರಲ್ಲಿ ಬ್ರೆಜಿಲ್ನ ಅಧ್ಯಕ್ಷ ಜೈರ್ ಬೋಲ್ಸಾನಗೆ ಬೆಂಬಲ ನೀಡಿ ಜನಸಾಮಾನ್ಯರ ಆಕ್ರೊಶಕ್ಕೂ ಗುರಿಯಾಗಿದ್ದ. ಅಲ್ಲದೆ ಇತ್ತೀಚೆಗೆ ಪಂದ್ಯವೊಂದರಲ್ಲಿ ಬ್ರೆಜಿಲ್ನ ರೋಬಿನ್ಹೋ ಜ್ಯೂನಿಯರ್ಗೆ ಮೈದಾನದಲ್ಲಿ ಹೊಡೆದಿರುವುದು ಕೂಡ ದೊಡ್ಡ ವಿವಾದವಾಗಿತ್ತು. ಆದ್ರೆ ನೇಮರ್ನ ಆಟ ಮತ್ತು ಸಮಾಜ ಸೇವೆಗಳು ಹಾಗೂ ತಪ್ಪಿಗೆ ಕ್ಷಮೆ ಕೇಳುವ ಗುಣಗಳುÀ ಈ ಎಲ್ಲಾ ಕಪ್ಪುಚುಕ್ಕೆಗಳನ್ನು ಅಳಿಸಿ ಹಾಕುತ್ತಿವೆ.
ಬಿಲಿಯನೇರ್ ನೇಮರ್ಗೆ ಬಿಲಿಯನೇರ್ ಬರೆದಿಟ್ಟ 8,300 ಕೋಟಿಯ ಉಯಿಲು..!
ಇದು ಯಾವ ಕ್ರೀಡಾಪಟುವಿನ ಬದುಕಿನಲ್ಲಿ ನಡೆಯದ ಅದ್ಭುತ ಪವಾಡ. ತನ್ನ ಹೆತ್ತವರನ್ನು ಕಳೆದುಕೊಂಡಿದ್ದ ಬಿಲಿಯನೇರ್ ತನ್ನ ಆಸ್ತಿಯನ್ನು ಕುಟುಂಬದವರಿಗೆ ಆಥವಾ ಸರ್ಕಾರಕ್ಕೆ ಬರೆದುಕೊಡಲಿಲ್ಲ. ಬದಲಾಗಿ ನೇಮರ್ ಹೆಸರಿಗೆ ಬರೆದುಕೊಟ್ಟಿದ್ದ. ನೇಮರ್ ಹಣಕ್ಕೆ ಆಸೆ ಪಡುವ ವ್ಯಕ್ತಿಯಲ್ಲ. ತನ್ನ ಸಂಪತ್ತಿನ ಬಹುತೇಕ ಹಣವನ್ನು ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸುತ್ತಿದ್ದಾನೆ. ಬಡ ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಹಲವು ಸಾಮಾಜಿಕ ಕಾರ್ಯಗಳಿಗೆ ನೇಮರ್ ಕೈಜೋಡಿಸಿದ್ದಾನೆ. ಹೀಗಾಗಿ ನನ್ನ ಆಸ್ತಿಯನ್ನು ನೇಮರ್ಗೆ ಬರೆದುಕೊಡುತ್ತಿದ್ದೇನೆ ಎಂದು ಆ ಬಿಲಿಯನೇರ್ ಹೇಳಿಕೊಂಡಿದ್ದಾನೆ. ಬಹುಶಃ ಇಂತಹ ಅದೃಷ್ಟ ನೇಮರ್ಗೆ ಮಾತ್ರ ಸಿಗಲು ಸಾಧ್ಯ..!
ಹೌದು, ನೇಮರ್ ವೃತ್ತಿಪರ ಫುಟ್ಬಾಲ್ ಬದುಕಿನಲ್ಲಿ ಹಲವು ಏರಿಳಿತಗಳನ್ನು ಕಂಡಿದ್ದಾನೆ. ಸೊಗಸಾದ ಆಟದ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದ ನೇಮರ್ಗೆ ಗಾಯ ಅನ್ನೋದು ಬೆಂಬಿಡದೆ ಕಾಡುತ್ತಿದೆ. ಮೈದಾನದಲ್ಲಿ ಮುನ್ನುಗ್ಗಿ ಆಟವಾಡುತ್ತಿದ್ದಾಗ ಹಲವಾರು ಬಾರಿ ಎದುರಾಳಿ ಆಟಗಾರರು ಟ್ಯಾಕಲ್ ಮಾಡುತ್ತಿದ್ದರು. ಹೀಗಾಗಿ ನೋವನ್ನು ಸಹಿಸಿಕೊಂಡು ಅಂಗಣದಲ್ಲಿ ನರಳಾಡುತ್ತಿದ್ದ. ಇದನ್ನು ಕಂಡ ಕೆಲವರು ನೇಮರ್ ಮಹಾನ್ ನಾಟಕಕಾರ ಅಂತ ಅಣಕಿಸುತ್ತಿದ್ದರು.
ಆದ್ರೆ ಈ ಗಾಯಗಳೇ ಸಾಕಷ್ಟು ಬಾರಿ ನೇಮರ್ನ ಯಶಸ್ಸಿಗೆ ಅಡ್ಡಿಯನ್ನುಂಟು ಮಾಡಿವೆ. ಅದರಲ್ಲೂ 2014 ವಿಶ್ವಕಪ್ನ ಸ್ವಿಜರ್ಲೆಂಡ್ ವಿರುದ್ದದ ಪಂದ್ಯದ ವೇಳೆ ನೇಮರ್ನ ಬೆನ್ನಿಗೆ ಬಲವಾದ ಏಟು ಕೂಡ ಬಿದ್ದಿತ್ತು. ಆದ್ರೂ ನೇಮರ್ ಗೋಲು ಗಳಿಕೆಯಲ್ಲಿ ಬ್ರೆಜಿಲ್ನ ದಂತಕತೆ ಪೀಲೆ, ರೋನಾಲ್ಡೊನ ದಾಖಲೆಗಳನ್ನು ಅಳಿಸಿಹಾಕಿದ್ದಾನೆ.
ಇದೀಗ 981 ದಿನಗಳ ಬಳಿಕ ಮತ್ತೆ ಅಂಗಣದಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ. 4ನೇ ವಿಶ್ವಕಪ್ ಆಡುತ್ತಿರುವ ನೇಮರ್, ಈ ಬಾರಿ ಟ್ರೋಫಿ ಗೆದ್ದು ತನ್ನ ಫುಟ್ಬಾಲ್ ಬದುಕನ್ನು ಅರ್ಥಪೂರ್ಣವಾಗಿಸಿಕೊಳ್ಳಬೇಕು ಎಂಬ ಇರಾದೆಯಲ್ಲಿದ್ದಾನೆ.
ಒಟ್ಟಿನಲ್ಲಿ, ಫುಟ್ಬಾಲ್ ಜಗತ್ತು ನೇಮರ್ನನ್ನು ಶಿಸ್ತಿನ ಆಟಗಾರನಲ್ಲ ಎಂದು ಹೇಳಬಹುದು, ಅಹಂಕಾರಿ ಅಂತ ಜರೆಯಬಹುದು.. ವಿವಾದಗಳ ಮನುಷ್ಯ ಅಂತ ಟೀಕೆ ಮಾಡಬಹುದು..ಆದ್ರೆ ನೇಮರ್ ಫುಟ್ಬಾಲ್ ಜಗತ್ತಿನ ಅಪ್ಪಟ ಬ್ರ್ಯಾಂಡ್. ಹಸಿರು ಅಂಗಣದ ಜಾದುಗಾರ. ಅದಕ್ಕಿಂತ ಮಿಗಿಲಾಗಿ ಕೋಟ್ಯಂತರ ಬಡ ಮಕ್ಕಳ ಕನಸುಗಳನ್ನು ನನಸು ಮಾಡುತ್ತಿರುವ ಪ್ರೀತಿಯ ರಾಜಕುಮಾರ
ಸನತ್ ರೈಸ್ಪೋರ್ಟ್ಸ್ ಜರ್ನಲಿಸ್ಟ್