ನಾಗ್ಪುರ: ಮಹಾರಾಷ್ಟ್ರ ರಾಜಕೀಯದಲ್ಲಿ ಒಂದು ಅಪರೂಪದ ಹಾಗೂ ಅಚ್ಚರಿಯ ಬೆಳವಣಿಗೆ ನಡೆದಿದೆ. ಸಿಎಂ ದೇವೇಂದ್ರ ಫಡ್ನವೀಸ್ ಮತ್ತು ಶಿವಸೇನಾ(ಯುಬಿಟಿ) ಮುಖ್ಯಸ್ಥ ಉದ್ದವ್ ಠಾಕ್ರೆ ಒಂದೇ ವಿಮಾನದಲ್ಲಿ ಪ್ರಯಾಣ ಮಾಡಿದ್ದಾರೆ. ಅಷ್ಟೇ ಅಲ್ಲದೆ ಇಬ್ಬರು ನಾಯಕರು ಪರಸ್ಪರ ಕೈ ಕುಲುಕಿ ಕುಶಲೋಪಚಾರ ವಿಚಾರಿಸಿಕೊಂಡಿದ್ದಾರೆ,
ಇತ್ತೀಚೆಗೆ ಆಪರೇಷನ್ ಟೈಗರ್ ಹೆಸರಿನಲ್ಲಿ ಉದ್ದವ್ ಶಿವಸೇನಾ ಪಕ್ಷದ 6 ಸಂಸದರು ಎನ್ಡಿಯ ಕೂಟದ ಶಿಂಧೆ ಬಣಕ್ಕೆ ಸೇರ್ಪಡೆಯಾಗಿದ್ದರು. ಇದರಿಂದಾಗಿ ಮಹರಾಷ್ಟ್ರ ರಾಜಕಾರಣದಲ್ಲಿ ಠಾಕ್ರೆ ಕುಟುಂಬದ ಅಧ್ಯಾಯ ಬಹುತೇಕ ಅಂತ್ಯವಾಯ್ತು ಎಂದೇ ವಿಶ್ಲೇಷಣೆ ಮಾಡಲಾಗಿತ್ತು. ಉದ್ದವ್ ಠಾಕ್ರೆ ಕೂಡ ಬಿಜೆಪಿ ಮತ್ತು ಶಿಂಧೆ ಶಿವಸೇನೆ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದರು. ಆದರೆ ನಿನ್ನೆ ರಾಜಕೀಯ ಕಾರ್ಯಕ್ರಮಗಳ ಕಾರಣಕ್ಕೆ ಉಭಯ ನಾಯಕರು ಮುಂಬೈನಿಂದ ನಾಗ್ಪುರಕ್ಕೆ ತೆರಳುತ್ತಿದ್ದರು. ಕಾಕತಾಳೀಯ ಎಂಬಂತೆ ಇಬ್ಬರಿಗೂ ಒಂದೇ ಕಮರ್ಷಿಯಲ್ ವಿಮಾನದಲ್ಲಿ ಸೀಟು ಕಾಯ್ದಿರಿಸಲಾಗಿತ್ತು. ವಿಮಾನದ ಒಳಗಡೆ ಇಬ್ಬರು ನಾಯಕರು ಎದುರಾದಾಗ, ಹಳೆಯ ರಾಜಕೀಯ ಕಹಿ ನೆನಪುಗಳನ್ನು ಬದಿಗಿಟ್ಟು ಅತ್ಯಂತ ಸೌಜನ್ಯದಿಂದ ಕೈಕುಲುಕಿದ್ದಾರೆ.
ಇದೇ ವಿಮಾನದಲ್ಲಿ ಉದ್ಧವ್ ಠಾಕ್ರೆ ಅವರ ಆಪ್ತ ಹಾಗೂ ಸಂಸದ ಸಂಜಯ್ ರಾವತ್ ಮತ್ತು ಕಾಂಗ್ರೆಸ್ ನಾಯಕ ವಿಜಯ್ ವಡೆಟ್ಟಿವಾರ್ ಕೂಡ ಪ್ರಯಾಣಿಸುತ್ತಿದ್ದರು. ಉದ್ಧವ್ ಠಾಕ್ರೆ ಮತ್ತು ದೇವೇಂದ್ರ ಫಡ್ನವಿಸ್ ಇಬ್ಬರೂ ಇದನ್ನು ಕೇವಲ ಕಾಕತಾಳೀಯ ಭೇಟಿ ಎಂದಿದ್ದಾರೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಪೂರ್ವ ನಿಗದಿತ ಸರ್ಕಾರಿ ಮತ್ತು ರಾಜಕೀಯ ಕಾರ್ಯಕ್ರಮಗಳ ಭಾಗವಾಗಿ ತಮ್ಮ ತವರು ರಾಜ್ಯ ಮತ್ತು ವಿಧಾನಸಭಾ ಕ್ಷೇತ್ರವಾದ ನಾಗ್ಪುರಕ್ಕೆ ಪ್ರಯಾಣಿಸುತ್ತಿದ್ದರು. ಉದ್ಧವ್ ಠಾಕ್ರೆ ಶನಿವಾರದಿಂದ ಮೂರು ದಿನಗಳ ವಿದರ್ಭ ಮತ್ತು ಮರಾಠವಾಡ ಪ್ರವಾಸಕ್ಕಾಗಿ ನಾಗ್ಪುರಕ್ಕೆ ಆಗಮಿಸಿದ್ದರು.
ಇನ್ನು ಈ ಕುರಿತು ಉಭಯ ಪಕ್ಷದ ನಾಯಕರು ಪ್ರತಿಕ್ರಿಯೆ ನೀಡಿದ್ದು “ಮಹಾರಾಷ್ಟ್ರದ ರಾಜಕೀಯ ಸಂಸ್ಕೃತಿಯಲ್ಲಿ ವೈಯಕ್ತಿಕ ದ್ವೇಷಕ್ಕೆ ಜಾಗವಿಲ್ಲ. ನಾವು ರಾಜಕೀಯವಾಗಿ ಭಿನ್ನಾಭಿಪ್ರಾಯ ಹೊಂದಿದ್ದರೂ, ಸಾರ್ವಜನಿಕವಾಗಿ ಎದುರಾದಾಗ ಕನಿಷ್ಠ ಸೌಜನ್ಯ ಪ್ರದರ್ಶಿಸುವುದು ನಮ್ಮ ಸಂಪ್ರದಾಯ” ಎಂದು ಉಭಯ ಪಕ್ಷಗಳ ನಾಯಕರು ಸ್ಪಷ್ಟಪಡಿಸಿದ್ದಾರೆ.