Search


ಅತ್ಯುತ್ಸಾಹದಲ್ಲಿ ಎಡವಟ್ಟು ಮಾಡಿಕೊಂಡ ಅಭಿಜಿತ್‌ ದೀಪ್ಕೆ; ಶಿಕ್ಷಕಿ ನೀಡಿದ ದೂರಿನ ಮೇರೆಗೆ FIR ದಾಖಲು

ಮುಂಬೈ: ಸರ್ಕಾರಿ ಶಾಲೆಗೆ ಹೇಳದೆ, ಕೇಳದೆ ಭೇಟಿ ನೀಡಿದ ಸಿಜೆಪಿ ಮುಖ್ಯಸ್ಥ ಅಭಿಜಿತ್‌ ದೀಪ್ಕೆ ವಿರುದ್ಧ ಪ್ರಕರಣ ದಾಖಲಾಗಿದೆ. ಅಷ್ಟೇ ಅಲ್ಲದೇ ಶಿಕ್ಷಕರಿಗೆ ಬೆದರಿಕೆ ಹಾಕಿರುವ ಆರೋಪವು ಕೇಳಿ ಬಂದಿದ್ದು. ಶಿಕ್ಷಕಿ ಸಯ್ಯದ್ ಶಮ್ಶಾದ್‌ಬಾನೋ ಖೈರಾತ್ ಅಲಿ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ. 

ಕೆಲ ತಿಂಗಳಿಂದ ದೇಶಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ಸಿಜೆಪಿ, ಇದೀಗ ಶಿಕ್ಷಣ ವ್ಯವಸ್ಥೆಯನ್ನ ಸರಿ ಪಡಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದೆ, ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ಕೊಡಿಸುವಲ್ಲಿ ಯಶಸ್ವಿಯಾಗಿರುವ ಸಿಜೆಪಿ, ಅತ್ಯುತ್ಸಾಹದಲ್ಲಿ ಕೆಲವು ಅಚಾತುರ್ಯಗಳನ್ನು ಮಾಡಿಕೊಳ್ಳುತ್ತಿದೆ, ಎರಡು ದಿನಗಳ ಹಿಂದೆಯಷ್ಟೇ ರಾಜಸ್ಥಾನದ ಹಳ್ಳಿಯೊಂದಕ್ಕೆ ಹೇಳದೆ ಕೇಳದೆ ಹೋಗಿ, ಶಾಲೆ ಪರಿಶೀಲನೆ ನಡೆಸುತ್ತೇವೆ ಎಂದಿದ್ದ ಕಾಕ್ರೋಚ್‌ಗಳಿಕೆ ಸ್ಥಳೀಯರು ಧರ್ಮದೇಟು ಕೊಟ್ಟು ಕಳಿಸಿದ್ದರು, ಇದೀಗ ಸಿಜೆಪಿ ಮುಖ್ಯಸ್ಥ ಅಭಿಜಿತ್‌ ದೀಪ್ಕೆ ಕೂಡ ಮಹಾರಾಷ್ಟ್ರದ ಶಾಲೆಗೆ ಭೇಟಿ ನೀಡಿದ ವಿಚಾರ ಚರ್ಚೆಗೆ ಗ್ರಾಸವಾಗಿದ್ದು, ದೀಪ್ಕೆ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಮಹಾರಾಷ್ಟ್ರದ ಔಸಾ ಸಮೀಪದಲ್ಲಿರುವ ಜಾವಳಿ ಗ್ರಾಮದಲ್ಲಿರುವ ಜಿಲ್ಲಾ ಪಂಚಾಯತ್‌ ಉರ್ದು ಶಾಲೆಗೆ ಅಭಿಜಿತ್‌ ದೀಪ್ಕೆ ಭೇಟಿ ಕೊಟ್ಟಿದ್ದರು, ಯಾವುದೇ ಅನುಮತಿ ಪಡೆಯದೆ ಶಾಲೆಯೊಳಗೆ ಪ್ರವೇಶಿಸಿದ ದೀಪ್ಕೆ ಮತ್ತು ಸಹಚರರು, ವಿದ್ಯಾರ್ಥಿಗಳ ನಡುವೆ ಕುಳಿತು ಪ್ರಶ್ನೆ ಕೇಳಿದ್ದಾರೆ. ಈ ಘಟನೆ ಕುರಿತು ಶಾಲೆಯ 53 ವರ್ಷದ ಶಿಕ್ಷಕಿ  ಸಯ್ಯದ್ ಶಮ್ಶಾದ್‌ಬಾನೋ ಖೈರಾತ್ ಅಲಿ ಔಸಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದು,  ʻಅನುಮತಿ ಇಲ್ಲದೇ ಸರ್ಕಾರಿ ಶಾಲೆಗೆ ಪ್ರವೇಶಿಸುವುದು, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಹಾಗೂ ಶಿಕ್ಷಕರಿಗೆ ಬೆದರಿಕೆ ಹಾಕಿದ ಆರೋಪಗಳ ಮೇಲೆ ಈ ಎಫ್‌ಐಆರ್ ದಾಖಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 132, 329(3), 351(2) ಮತ್ತು 356(2) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಬೇರೆ ಶಾಲೆಯ ವಿದ್ಯಾರ್ಥಿಗಳನ್ನ ಕರೆತಂದ ದೀಪ್ಕೆ...!

‘ಸ್ಕೂಲ್ ಠೀಕ್ ಕರೋ’ ಅಭಿಯಾನದಡಿ ಶಾಲೆಗೆ ಭೇಟಿ ನೀಡಿದ್ದ ದೀಪ್ಕೆ, ಬೇರೆ ಶಾಲೆಯ ವಿದ್ಯಾರ್ಥಿಗಳನ್ನು ಕರೆ ತಂದಿದ್ದರು ಎಂಬ ಆರೋಪ ಕೇಳಿ ಬಂದಿದೆ. ದೀಪ್ಕೆ ಹಾಗೂ ಅವರ ಸಹಚರರು ಯಾವುದೇ ಅನುಮತಿ ಪಡೆಯದೇ ಶಾಲೆಯೊಳಗೆ ಪ್ರವೇಶಿಸಿ, ವಿದ್ಯಾರ್ಥಿಗಳ ನಡುವೆ ಕುಳಿತು ಅವರಿಗೆ ಹಲವು ಪ್ರಶ್ನೆಗಳನ್ನ ಕೇಳಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, ತಮ್ಮ ಭೇಟಿಯ ಸಂದರ್ಭದಲ್ಲಿ ಬೇರೆ ಶಾಲೆಯ ವಿದ್ಯಾರ್ಥಿಗಳನ್ನು ಕರೆತಂದು ತರಗತಿಯಲ್ಲಿ ಕೂರಿಸಲಾಗಿದೆ ಎಂದು ಆರೋಪಿಸುವ ಮೂಲಕ ಶಾಲೆಯ ಹೆಸರಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪವೂ ಇದೆ. ಶಿಕ್ಷಕರನ್ನು ಅಮಾನತುಗೊಳಿಸುವಂತೆ ಮಾಡಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ ಎಂದೂ ದೂರಿನಲ್ಲಿ ತಿಳಿಸಲಾಗಿದೆ.

By Ravikumar - 23-08-2026


Ads in Post