Search


ಸತೀಶ್ ಜಾರಕಿಹೊಳಿ ಮನೆಯಲ್ಲಿ ಚೀನಾ, ಅಮೇರಿಕಾ ಸೇರಿದಂತೆ 5 ರಾಷ್ಟ್ರಗಳ ವಿದೇಶಿ ಕರೆನ್ಸಿ ಪತ್ತೆ

ಬೆಂಗಳೂರು: ವಿದೇಶದಲ್ಲಿ ಹಣ ಹೂಡಿಕೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ನಡೆಸಿದ ದಾಳಿ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ದಾಳಿ ವೇಳೆ ಸುಮಾರು ₹15 ಲಕ್ಷ ಮೌಲ್ಯದ ದಾಖಲೆಗಳಿಲ್ಲದ ವಿದೇಶಿ ಕರೆನ್ಸಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಪತ್ತೆಯಾದ ಹಣಕ್ಕೆ ಸಂಬಂಧಿಸಿದ ಸೂಕ್ತ ದಾಖಲೆಗಳು ಲಭ್ಯವಿಲ್ಲ ಎನ್ನಲಾಗಿದ್ದು, ED ಅಧಿಕಾರಿಗಳು ವಿದೇಶಿ ಹಣವನ್ನು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ಪತ್ತೆಯಾದ ಕರೆನ್ಸಿಯ ಫೋಟೋಗಳನ್ನು ಕೂಡ ED ಬಿಡುಗಡೆ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಹಣದ ಮೂಲ ಹಾಗೂ ಅದರ ಬಳಕೆಯ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.

ದಾಳಿ ವೇಳೆ ಐದು ದೇಶಗಳ ಕರೆನ್ಸಿಗಳು ಪತ್ತೆಯಾಗಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ. ಅಮೆರಿಕದ ಡಾಲರ್, ಮಲೇಷಿಯಾದ ರಿಂಗೆಟ್, ಚೀನಾದ ಯುವಾನ್, ಯುರೋ ಹಾಗೂ ದುಬೈನ ದಿರಹಂ ಕರೆನ್ಸಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಒಟ್ಟು ವಿದೇಶಿ ಕರೆನ್ಸಿಯ ಮೌಲ್ಯ ಸುಮಾರು ₹15 ಲಕ್ಷ ಎಂದು ಹೇಳಲಾಗಿದೆ. ವಿದೇಶಿ ಹಣದ ಮೂಲ, ಅದನ್ನು ಯಾವ ಉದ್ದೇಶಕ್ಕಾಗಿ ಇರಿಸಲಾಗಿತ್ತು ಹಾಗೂ ವಿದೇಶಿ ಹೂಡಿಕೆ ಆರೋಪಕ್ಕೂ ಇದಕ್ಕೂ ಸಂಬಂಧವಿದೆಯೇ ಎಂಬುದನ್ನು ED ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

By Ravikumar - 12-09-2026


Ads in Post