ರಾಯಚೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಆಯೋಜಿಸಿರುವ ‘ಬಳ್ಳಾರಿ ಚಲೋ’ ಪಾದಯಾತ್ರೆಗೆ ಅಧಿಕೃತ ಚಾಲನೆ ದೊರೆತಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವು ಬಿಜೆಪಿ ನಾಯಕರು ಕಹಳೆ ಮೊಳಗಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು.
ಬಿ.ವೈ. ವಿಜಯೇಂದ್ರ, ಆರ್. ಅಶೋಕ್, ಶ್ರೀರಾಮುಲು ಹಾಗೂ ಛಲವಾದಿ ನಾರಾಯಣಸ್ವಾಮಿ ಅವರು ಕಹಳೆ ಊದುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರೈತಗೀತೆಯೊಂದಿಗೆ ಪಾದಯಾತ್ರೆಯ ವೇದಿಕೆ ಕಾರ್ಯಕ್ರಮ ಆರಂಭಗೊಂಡಿತು.
ಸುಮಾರು 175 ಕಿಲೋಮೀಟರ್ಗಳ ಪಾದಯಾತ್ರೆ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಜನಾಕ್ರೋಶ ವ್ಯಕ್ತಪಡಿಸಲು ಬಿಜೆಪಿ ಮುಂದಾಗಿದೆ. ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಶ್ರೀರಾಮುಲು, ಜನಾರ್ದನ ರೆಡ್ಡಿ, ಛಲವಾದಿ ನಾರಾಯಣಸ್ವಾಮಿ, ಜಗದೀಶ್ ಶೆಟ್ಟರ್, ಸಿ.ಟಿ. ರವಿ ಸೇರಿದಂತೆ ಹಲವು ಬಿಜೆಪಿ ನಾಯಕರು ಭಾಗವಹಿಸಿದ್ದರು.
ಪಾದಯಾತ್ರೆಗೆ ಚಾಲನೆ ನೀಡುವ ಮೊದಲು ಬಿ.ವೈ. ವಿಜಯೇಂದ್ರ ಅವರು ಗುರಗುಂಟಾ ಅಮರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಪಾದಯಾತ್ರೆ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿದ ಅವರು ಬಳಿಕ ಗಜಯೋಗಿ ಶಿವಾಚಾರ್ಯ ಶ್ರೀಗಳ ಆಶೀರ್ವಾದವನ್ನೂ ಪಡೆದರು. ಈ ಸಂದರ್ಭದಲ್ಲಿ ಶಾಸಕ ಮಾನಪ್ಪ ವಜ್ಜಲ್, ಪರಿಷತ್ ಸದಸ್ಯ ರವಿಕುಮಾರ್, ಪ್ರತಾಪಗೌಡ ಪಾಟೀಲ್, ಬಂಗಾರು ಹನುಮಂತು ಹಾಗೂ ಬಸವರಾಜ ದಡೆಸಗೂರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಶಾಸಕ ಮಾನಪ್ಪ ವಜ್ಜಲ್ ಅವರ ನಿವಾಸಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ ಹಾಗೂ ಶಾಸಕ ಜನಾರ್ದನ ರೆಡ್ಡಿ ಸೇರಿದಂತೆ ಹಲವು ಬಿಜೆಪಿ ನಾಯಕರು ಭೇಟಿ ನೀಡಿದ್ದರು. ‘ಬಳ್ಳಾರಿ ಚಲೋ’ ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಜನಾಕ್ರೋಶಕ್ಕೆ ಮಣಿದು ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿದ್ದು, ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸರ್ಕಾರ ಹತ್ತು ಹಲವು ಹಗರಣಗಳಲ್ಲಿ ಮುಳುಗಿದೆ ಎಂದು ಆರೋಪಿಸಿದರು. ಇಂತಹ ಸರ್ಕಾರದ ವಿರುದ್ಧ ಬಿ.ವೈ. ವಿಜಯೇಂದ್ರ ಸೇರಿದಂತೆ ಬಿಜೆಪಿ ನಾಯಕರು ಹೋರಾಟಕ್ಕೆ ಇಳಿದಿದ್ದಾರೆ. ರಾಜ್ಯ ಸರ್ಕಾರ ತೊಲಗುವವರೆಗೂ ಬಿಜೆಪಿಯ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದು ಯಡಿಯೂರಪ್ಪ ಗುಡುಗಿದರು.
ಇದೇ ವೇಳೆ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಅಮೆರಿಕದಿಂದ ಮರಳಿದ ಬಳಿಕ ದೇಶದಲ್ಲೇ ಸಂಚಲನ ಮೂಡಿಸುವ ವಿಷಯವನ್ನು ಬಹಿರಂಗಪಡಿಸುವುದಾಗಿ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಯಡಿಯೂರಪ್ಪ, “ಕುಮಾರಸ್ವಾಮಿ ಅವರು ಸುಮ್ಮನೆ ಯಾವುದೇ ಮಾತು ಹೇಳುವುದಿಲ್ಲ. ಅವರು ಹೇಳಿದ್ದಾರೆ ಎಂದರೆ ಸರ್ಕಾರದಲ್ಲೇ ಸಂಚಲನ ಮೂಡಿಸುವಂತಹ ಮಹತ್ವದ ವಿಷಯ ಇರಬಹುದು. ಅವರ ಹೋರಾಟಕ್ಕೆ ಬಿಜೆಪಿ ಸಂಪೂರ್ಣ ಬೆಂಬಲ ನೀಡಲಿದೆ” ಎಂದು ಹೇಳಿದರು.