Search


ರೈತರ ಜಮೀನನ್ನು ಇಟ್ಕೊಂಡು ದಂಧೆ ಮಾಡ್ತಿದ್ದಾರೆ; ಡಿಕೆ ಹೆಸರೇಳದೆ ವಾಗ್ದಾಳಿ ನಡೆಸಿದ HDD

ಬೆಂಗಳೂರು : ಬಿಡದಿ ಟೌನ್‌ಶಿಪ್‌ ನಿರ್ಮಾಣಕ್ಕೆ ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡ ವಿರೋಧ ವ್ಯಕ್ತಪಡಿಸಿದ್ದು. "ರೈತರ ಜಮೀನನ್ನು ಇಟ್ಟುಕೊಂಡು ದಂಧೆ ನಡೆಸುತ್ತಿದ್ದಾರೆ. ಕನಕಪುರದಲ್ಲಿ ಎಷ್ಟು ಜಮೀನು ವಶಪಡಿಸಿಕೊಂಡಿದ್ದಾರೆ ಎಂಬ ಮಾಹಿತಿ ನನ್ನ ಬಳಿ ಇದೆ. ಇದರ ಕುರಿತು ಇಂದಿನಿಂದ ನನ್ನ ಹೋರಾಟ ಆರಂಭವಾಗಿದೆ ಎಂದು ಹೇಳಿದರು. 

ಬೆಂಗಳೂರಿನ ಜೆಡಿಎಸ್‌ ಕಛೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಹೆಚ್‌ಡಿಡಿ "ಬಿಡದಿ ಟೌನ್‌ಶಿಫ್‌ ನಿರ್ಮಾಣಕ್ಕೆ ಸ್ಥಳೀಯ ರೈತರ ಜಮೀನನ್ನು ಇಟ್ಕೊಂಡು ದಂಧೆ ನಡೆಸುತ್ತಿದ್ದಾರೆ. ಬಿಡದಿಯಲ್ಲಿ ರೈತರು ಕಣ್ಣೀರು ಹಾಕ್ತಿದ್ದಾರೆ. ಬಿಡದಿ ಬಳಿ ಹೋಗೋಣ, ನಾನು ಬರ್ತೀನಿ, ಸಿದ್ದರಾಮಯ್ಯ ನೀವು ಬನ್ನಿ. ಸ್ಥಳೀಯ ಶಾಸಕರು, ತಹಶೀಲ್ದಾರ್‌ ಇಲ್ಲಿಯವರೆಗೂ ಜನರ ಸಮಸ್ಯೆ ಕೇಳಿಲ್ಲ ಎಂದು ಹೇಳಿದರು. ಇನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಹೆಸರು ಹೇಳದೆ ತೀವ್ರ ವಾಗ್ದಾಳಿ ಮಾಡಿದ ಅವರು ಕನಕಪುರದಲ್ಲಿ ಎಷ್ಟು ಜಮೀನು ವಶಪಡಿಸಿಕೊಂಡಿದ್ದಾರೆಂಬ ಮಾಹಿತಿ ಇದೆ ಎಂದರು. ಸ್ಥಳಕ್ಕೆ ಹೋಗ್ತೀನಿ, ರೈತರು ಹೊಡೆದ್ರೂ ಹೊಡೆಸಿಕೊಳ್ಳುತ್ತೇನೆ ಎಂಬ ಡಿಕೆ ಶಿವಕುಮಾರ್​ ಹೇಳಿಕೆಗೆ ಕೌಂಟರ್ ನೀಡಿದ ದೇವೇಗೌಡರು, ಅವರು ಹೋಗಿ ರೈತರಿಂದ ಹೊಡೆಸಿಕೊಂಡು ಬರಲಿ, ಆಮೇಲೆ ಮಾತಾಡ್ತೇನೆ ಎಂದು ತಿರುಗೇಟು ನೀಡಿದರು.

ಬಿಡದಿ ಸುತ್ತಮುತ್ತ ದೊಡ್ಡ ಮಟ್ಟದಲ್ಲಿ ಹೈನುಗಾರಿಕೆ ಮಾಡ್ತಿದ್ದಾರೆ. ಈ ಭಾಗಕ್ಕೆ 250 ಕೋಟಿ ವೆಚ್ಚದ ನೀರಾವರಿ ಯೋಜನೆ ತಂದಿದ್ದಾರೆ. ಇಂತಹ ನೀರಾವರಿ ಜಾಗವನ್ನು ಸ್ವಾಧೀನ ಮಾಡಿಕೊಳ್ಳಲು ರಾಷ್ಟ್ರೀಯ ಪಕ್ಷದ ಅಧ್ಯಕ್ಷರು ಮುಂದಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರೇ ನನ್ನ ಜೊತೆಗೆ ಕೆಲಸ ಮಾಡಿದ್ದೀರಿ, ಬಡವರು, ಹಿಂದುಳಿದವರಿಗೆ ಸಾಮಾಜಿಕ ನ್ಯಾಯ ಕೊಡಬಾರದಾ? ಬೆಂಗಳೂರು ಹೊಣೆಗಾರಿಕೆ ಹೊತ್ತಿರುವ ಡಿಸಿಎಂ ಡಿಕೆ ಶಿವಕುಮಾರ್​ ಒತ್ತಡಕ್ಕೆ ಮಣಿದು ಜನ ಸಾಮಾನ್ಯರಿಗೆ ಆಗುತ್ತಿರುವ ಅನ್ಯಾಯ ತಡೆಗಟ್ಟಲು ಆಗುತ್ತಿಲ್ಲವಾ ಎಂದು ಪ್ರಶ್ನಿಸಿದರು. ಬಿಡಿಎನಲ್ಲಿ ಅಕ್ರಮ ನಡೆದಿದೆ, ಅದರ ಬಗ್ಗೆಯೂ ಹೋರಾಟ ಮಾಡುತ್ತೇನೆ ಎಂದರು.

ಬೆಂಗಳೂರಿನಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಲು ಮಾಗಡಿ, ಹೊಸಕೋಟೆ ಸೇರಿ ಬೆಂಗಳೂರು ಅಕ್ಕಪಕ್ಕದಲ್ಲಿ 5 ಟೌನ್‌ಶಿಪ್‌ಗಳನ್ನು ನಿರ್ಮಿಸಲು ಅಂದಿನ ಸಿಎಂ ಕುಮಾರಸ್ವಾಮಿ ಮುಂದಾಗಿದ್ದರು. ಆದರೆ ರೈತರು, ಸಾರ್ವಜನಿಕ ವಿರೋಧ ಹಿನ್ನೆಲೆ ಪ್ರಾಜೆಕ್ಟ್ ಕೈಬಿಡುತ್ತಾರೆ. ಈಗ ಬೇರೆ ಬೇರೆ ಪ್ರಾಜೆಕ್ಟ್ ಬಂದಿದೆ ಎಂದರು.

By News Desk - 17-05-2026


Ads in Post