Search


ಡಿಕೆಶಿ ಭೇಟಿಯಾದ ಗೌತಮ್ ಅದಾನಿ; ನಾವು ಉದ್ಯಮಿಗಳ ವಿರುದ್ಧವಲ್ಲ ಎಂದ ಪವನ್ ಖೇರಾ

ನವದೆಹಲಿ: ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಉದ್ಯಮಿ ಗೌತಮ್ ಅದಾನಿ ಅವರ ಭೇಟಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ಪವನ್ ಖೇರಾ ಸ್ಪಷ್ಟನೆ ನೀಡಿದ್ದಾರೆ. ಕಾಂಗ್ರೆಸ್ ಯಾವುದೇ ನಿರ್ದಿಷ್ಟ ಉದ್ಯಮಿಯ ವಿರುದ್ಧವಲ್ಲ, ಆದರೆ ಯಾವುದೇ ಒಬ್ಬ ಉದ್ಯಮಿಗೆ ಸಂಪೂರ್ಣ ಏಕಸ್ವಾಮ್ಯ ದೊರೆಯುವುದನ್ನು ವಿರೋಧಿಸುತ್ತದೆ ಎಂದು ಅವರು ಹೇಳಿದ್ದಾರೆ.

ಗೌತಮ್ ಅದಾನಿ ಅವರು ಭಾನುವಾರ ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿ.ಕೆ. ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದರು. ರಾಜ್ಯದಲ್ಲಿ ಬಂಡವಾಳ ಹೂಡಿಕೆ ಅವಕಾಶಗಳು ಹಾಗೂ ಬೆಂಗಳೂರಿನ ಉದ್ದೇಶಿತ ಸುರಂಗ ರಸ್ತೆ ಯೋಜನೆ ಸೇರಿದಂತೆ ಹಲವು ವಿಚಾರಗಳು ಚರ್ಚೆಗೆ ಬಂದಿವೆ ಎಂದು ವರದಿಯಾಗಿದೆ.

ಈ ಭೇಟಿಯ ಕುರಿತು ಪ್ರತಿಕ್ರಿಯಿಸಿರುವ ಪವನ್ ಖೇರಾ, “ನಾವು ಉದ್ಯಮಿಗಳ ವಿರುದ್ಧವಲ್ಲ; ಏಕಸ್ವಾಮ್ಯದ ವಿರುದ್ಧ” ಎಂಬುದು ಕಾಂಗ್ರೆಸ್‌ನ ನಿಲುವು ಎಂದು ಹೇಳಿದ್ದಾರೆ. ಒಬ್ಬ ಉದ್ಯಮಿಗೆ ಯಾವುದೇ ಕ್ಷೇತ್ರದಲ್ಲಿ ಸಂಪೂರ್ಣ ಏಕಸ್ವಾಮ್ಯ ಸಿಗುವುದು ದೇಶದ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ಡಿ.ಕೆ. ಶಿವಕುಮಾರ್ ಕೂಡ ಭೇಟಿಯ ಕುರಿತು ಪ್ರತಿಕ್ರಿಯಿಸಿ, ಅದಾನಿ ಅವರಿಗೆ ಕರ್ನಾಟಕದಲ್ಲಿ ಹಲವು ಉದ್ಯಮಗಳಿದ್ದು, ತಾವು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿರುವ ಹಿನ್ನೆಲೆಯಲ್ಲಿ ಸೌಜನ್ಯಯುತವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.

ಮತ್ತೊಂದೆಡೆ, ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗೆ ಸುಮಾರು 17 ಕಿ.ಮೀ. ಉದ್ದದ ಸುರಂಗ ರಸ್ತೆ ನಿರ್ಮಾಣಕ್ಕೆ ಸರ್ಕಾlರ ಮುಂದಾಗಿದೆ. ಯೋಜನೆಗೆ ಸರ್ಕಾರ ಅಂದಾಜು ₹17,698 ಕೋಟಿ ವೆಚ್ಚ ನಿಗದಿಪಡಿಸಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿ ಅದಾನಿ ಎಂಟರ್‌ಪ್ರೈಸಸ್ ₹22,267 ಕೋಟಿ ಮೊತ್ತದ ಬಿಡ್ ಸಲ್ಲಿಸಿ L1 ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದು Public TV ವರದಿ ಮಾಡಿದೆ.

ಟೆಂಡರ್ ಅಂತಿಮಗೊಳ್ಳುವ ಮುನ್ನವೇ ಯೋಜನೆಗೆ ಸಂಬಂಧಿಸಿದ ಕೆಲವು ಪ್ರಾಥಮಿಕ ಭೂ ಸಮೀಕ್ಷೆ ಹಾಗೂ ಮಣ್ಣಿನ ಗುಣಮಟ್ಟ ಪರೀಕ್ಷೆಗಳನ್ನು ಸಂಸ್ಥೆ ನಡೆಸಿದೆ ಎಂದು ವರದಿಯಾಗಿದೆ. ವೆಚ್ಚ ಹೆಚ್ಚಳಕ್ಕೆ ರಾಜ್ಯ ಸಚಿವ ಸಂಪುಟದ ಅಂತಿಮ ಅನುಮೋದನೆ ಅಗತ್ಯವಿರುವ ಹಿನ್ನೆಲೆಯಲ್ಲಿ ಅದಾನಿ–ಡಿಕೆಶಿ ಭೇಟಿ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಒಟ್ಟಿನಲ್ಲಿ, ಅದಾನಿ ಅವರೊಂದಿಗೆ ಡಿ.ಕೆ. ಶಿವಕುಮಾರ್ ನಡೆಸಿದ ಮಾತುಕತೆ ಮತ್ತು ಕಾಂಗ್ರೆಸ್‌ನ ಅದಾನಿ ಕುರಿತ ಹಿಂದಿನ ನಿಲುವಿನ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಪವನ್ ಖೇರಾ ಕಾಂಗ್ರೆಸ್‌ನ ನಿಲುವು ಉದ್ಯಮಿಗಳ ವಿರುದ್ಧವಲ್ಲ, ಏಕಸ್ವಾಮ್ಯದ ವಿರುದ್ಧ ಎಂದು ಪುನರುಚ್ಚರಿಸಿದ್ದಾರೆ.

By Ravikumar - 24-08-2026


Ads in Post