ಕೊಪ್ಪಳ: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ರ ಉದ್ಘಾಟನೆಗೆ ಕೊಪ್ಪಳ ಗವಿಮಠದ ಮಹಾಸಂಸ್ಥಾನದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಅವರು ನೀಡಲಾಗಿದ್ದ ಆಹ್ವಾನವನ್ನು ತಿರಸ್ಕರಿಸಿದ್ದಾರೆ ಎಂಬ ವದಂತಿಗಳನ್ನು ಗವಿಮಠದ ಮೂಲಗಳು ಸ್ಪಷ್ಟವಾಗಿ ತಳ್ಳಿಹಾಕಿವೆ. ಸ್ವಾಮೀಜಿಯವರು ದಸರಾ ಉದ್ಘಾಟನೆಯ ಆಹ್ವಾನವನ್ನು ಸಂತೋಷದಿಂದಲೇ ಸ್ವೀಕರಿಸಿದ್ದಾರೆ ಎಂದು ಮಠ ತಿಳಿಸಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿಯವರನ್ನು ಆಹ್ವಾನಿಸಿದ್ದು, ಅವರು ಆಹ್ವಾನವನ್ನು ಅಂಗೀಕರಿಸಿದ್ದಾರೆ. ಕಳೆದ ಒಂದು ವಾರದಿಂದ ಮೌನ ವ್ರತದಲ್ಲಿದ್ದ ಸ್ವಾಮೀಜಿಯವರು ಶನಿವಾರ ಮಧ್ಯಾಹ್ನ ಮೌನವ್ರತವನ್ನು ಅಂತ್ಯಗೊಳಿಸಿದ್ದಾರೆ. ಈ ಸಂದರ್ಭವನ್ನು ಬಳಸಿಕೊಂಡು ಕೆಲವರು ಗೊಂದಲ ಸೃಷ್ಟಿಸುವ ಉದ್ದೇಶದಿಂದ ಆಹ್ವಾನ ತಿರಸ್ಕರಿಸಿದ್ದಾರೆ ಎಂಬ ವದಂತಿ ಹರಡಿಸುತ್ತಿದ್ದಾರೆ ಎಂದು ಮಠ ಆರೋಪಿಸಿದೆ.
ಗವಿಶ್ರೀಯವರು ಮೈಸೂರು ದಸರಾ ಉತ್ಸವವನ್ನು ಉದ್ಘಾಟಿಸುವುದು ಹೆಮ್ಮೆಯ ಸಂಗತಿ ಎಂದು ಗವಿಮಠ ಹೇಳಿದೆ. ಆಹ್ವಾನ ತಿರಸ್ಕರಿಸಿರುವ ಕುರಿತು ಗವಿಮಠವಾಗಲಿ ಅಥವಾ ಸ್ವಾಮೀಜಿಯವರಾಗಲಿ ಯಾವುದೇ ಅಧಿಕೃತ ಹೇಳಿಕೆ ಅಥವಾ ಪ್ರಕಟಣೆ ನೀಡಿಲ್ಲ. ಹೀಗಾಗಿ ಅನಗತ್ಯ ಗೊಂದಲ ಸೃಷ್ಟಿಸುವ ವದಂತಿಗಳಿಗೆ ಜನರು ಕಿವಿಗೊಡಬಾರದು ಎಂದು ಮಠ ಮನವಿ ಮಾಡಿದೆ.
ಇದೇ ವೇಳೆ, ಜಿಲ್ಲಾ ಉಳಿಸಿ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ಸಮಿತಿಯ ಸಂಚಾಲಕರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ಬಾಲ್ಡೋಟಾ ಸೇರಿದಂತೆ ವಿವಿಧ ಕೈಗಾರಿಕೆಗಳ ವಿಸ್ತರಣೆ ಹಾಗೂ ಹೊಸ ಕಾರ್ಖಾನೆಗಳ ಸ್ಥಾಪನೆಗೆ ಅನುಮತಿ ನೀಡಬಾರದು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.