ಬೆಂಗಳೂರು : ಕರ್ನಾಟಕ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ಇಂದು ಬೆಳಿಗ್ಗೆ ಸಿಎಂ ಸಿದ್ದರಾಮಯ್ಯ ರಾಜ್ಯಪಾಲರನ್ನ ಭೇಟಿಯಾಗಿ ತಮ್ಮ ರಾಜೀನಾಮೆ ಸಲ್ಲಿಕೆ ಮಾಡಲಿದ್ದಾರೆ ಎಂಬ ಸುದ್ದಿ ಬಂದಿತ್ತು. ಆದರೆ ಇದರ ನಡುವೆ ಮತ್ತೊಂದು ನಾಟಕೀಯ ಬೆಳವಣಿಗೆಯಾಗಿದ್ದು. ರಾಜ್ಯಪಾಲರ ಥಾವರ್ ಚಂದ್ ಗೆಹ್ಲೋಟ್ ಮಧ್ಯರಾತ್ರಿ ದಿಢೀರನೆ ಮುಂಬೈಗೆ ಪ್ರಯಾಣ ಬೆಳೆಸಿದ್ದಾರೆ. ಇದರಿಂದಾಗಿ ಇಂದು ರಾಜ್ಯ ಕಾಂಗ್ರೆಸ್ನಲ್ಲಿ ಯಾವೆಲ್ಲಾ ಬೆಳವಣಿಗೆಗಳು ನಡೆಯಲಿವೆ ಎಂಬುದು ಕುತೂಹಲ ಮೂಡಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಮೇ 28) ಬೆಳಗ್ಗೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿರುವ ಬೆನ್ನಲ್ಲೇ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಬುಧವಾರ ಮಧ್ಯರಾತ್ರಿ ದಿಢೀರನೆ ಮುಂಬೈಗೆ ಪ್ರಯಾಣ ಬೆಳೆಸಿರುವುದು ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಹಾಗೂ ಸಂಚಲನ ಮೂಡಿಸಿದೆ. ಸಂಬಂಧಿಕರ ಅನಾರೋಗ್ಯದ ಕಾರಣ ನೀಡಿ ರಾಜ್ಯಪಾಲರು ರಾತ್ರಿ 11.45ಕ್ಕೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈಗೆ ತೆರಳಿದ್ದಾರೆ. ರಾತ್ರಿ ಮುಂಬೈನಲ್ಲಿ ತಂಗಿರುವ ಅವರು, ಬೆಳಗ್ಗೆ ಇಂದೋರ್ಗೆ ಪ್ರಯಾಣಿಸುತ್ತಿದ್ದಾರೆ ಎನ್ನಲಾಗಿದೆ. ಸಿಎಂ ರಾಜೀನಾಮೆ ಸಲ್ಲಿಕೆಯ ಸಮಯದಲ್ಲೇ ರಾಜ್ಯಪಾಲರ ಈ ದಿಢೀರ್ ಪ್ರವಾಸ ಹೊಸ ರಾಜಕೀಯ ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿದೆ.
ಇದರ ನಡುವೆ ಸಿಎಂ ಆಪ್ತರು ಮತ್ತು ಅಭಿಮಾನಿಗಳಿಂದ ಸಿದ್ದರಾಮಯ್ಯರಿಗೆ ರಾಜೀನಾಮೆ ನೀಡದಂತೆ ಒತ್ತಡ ಹೆಚ್ಚುತ್ತಿದ್ದು. ಎಚ್.ಎಂ ರೇವಣ್ಣ, ಎಂ.ಬಿ ಪಾಟೀಲ್ ಸೇರಿದಂತೆ ಕೆಲ ನಾಯಕರು ಈಗಲೂ ಸಿಎಂ ಬದಲಾವಣೆ ಎಲ್ಲಾ ಊಹಾಪೋಹ ಎಂದು ಮಾತನಾಡಿದ್ದಾರೆ. ಇದರ ನಡುವೆ ರಾಜ್ಯ ಕಾಂಗ್ರೆಸ್ನಲ್ಲಿ ಇಂದು ಯಾವೆಲ್ಲಾ ಬೆಳವಣಿಗೆಗಳು ನಡೆಯುತ್ತವೆ ಎಂಬುದು ಕುತೂಹಲ ಮೂಡಿಸಿದೆ.