ವಾಣಿಜ್ಯ ನಗರಿ ಮುಂಬೈನಲ್ಲಿ ಭಾನುವಾರ ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಇಡೀ ಜನಜೀವನ ತತ್ತರಗೊಂಡಿದೆ. ಮಂಖುರ್ಡ್ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ನಾಲ್ಕು ಅಂತಸ್ತಿನ ಕಟ್ಟಡವೊಂದರ ಭಾಗ ಕುಸಿದು ಬಿದ್ದು ಆರು ಜನರು ಸಾವನ್ನಪ್ಪಿದ್ದಾರೆ. ನಗರದಾದ್ಯಂತ ರಸ್ತೆಗಳು ಜಲಾವೃತಗೊಂಡಿದ್ದು, ಮರಗಳು ಉರುಳಿಬಿದ್ದು ಅಪಾರ ಹಾನಿ ಸಂಭವಿಸಿದೆ.
ಮುಂಬೈನಲ್ಲಿ ಭಾನುವಾರ ಒಂದೇ ದಿನ ವಿವಿಧೆಡೆ 8 ಮಂದಿ ಬಲಿಯಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಮುಂಖುರ್ಡ್ ಪ್ರದೇಶದಲ್ಲಿ ಚಾಲ್ ಕಟ್ಟದ ಒಂದು ಭಾಗ ಕುಸಿದು 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ ಮರ ಬಿದ್ದು ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದ್ರೆ, ಕಟ್ಟಡದ ಗ್ರಿಲ್ ಪಾದಚಾರಿ ಮಾರ್ಗದ ಮೇಲೆ ಬಿದ್ದು ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ. ಹವಾಮಾನ ಇಲಾಖೆ ತೀವ್ರ ಮಳೆಯ ಮುನ್ನೆಚ್ಚರಿಕೆ ನೀಡಿರುವುದರಿಂದ ಮುಂಬೈ, ಥಾಣೆ, ಪಾಲ್ಘಢ ಮತ್ತು ಪುಣೆ ಜಿಲ್ಲೆಗಳಲ್ಲಿ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಇಂದು ಸಹ ಮಳೆಯ ಆರ್ಭಟ ಮುಂದುವರಿದಿದ್ದು, ಹಲವೆಡೆ ಭೂಕುಸಿತ, ಪ್ರವಾಹ ಉಂಟಾಗಿದೆ. ಇದರಿಂದ ಹಲವು ರೈಲು (Train) ಮಾರ್ಗಗಳ ಸಂಚಾರ ಸ್ಥಗಿತಗೊಂಡಿದೆ. ಕೆಲ ರೈಲುಗಳ ಮಾರ್ಗಗಳಲ್ಲಿ ಏಕಾಏಕಿ ಬದಲಾವಣೆ ಮಾಡಲಾಗಿದೆ. ಮುಂಬೈ – ಪುಣೆ ಎಕ್ಸ್ ಪ್ರೇಸ್ ವೇನಲ್ಲೂ (Mumbai Pune Expressway) ತೀವ್ರ ಹಾನಿಯಾಗಿರುವುದರಿಂದ ಸಂಚಾರ ಬಂದ್ ಮಾಡಲಾಗಿದ್ದು, ಸದ್ಯಕ್ಕೆ ಮುಂಬೈ, ಪುಣೆ ಸಂಪರ್ಕ ಕಡಿತಗೊಂಡಿದೆ. ಇದರಿಂದ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮುಂಬೈನಾದ್ಯಂತ ಹಲವೆಡೆ ಮರಗಳು ಬುಡಸಮೇತ ಉರುಳಿಬಿದ್ದಿವೆ. ಕುರ್ಲಾ ಪ್ರದೇಶದಲ್ಲಿ ಅಂಗಡಿಯೊಂದರ ಮೇಲೆ ಮರ ಬಿದ್ದು 63 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಬಾಂದ್ರಾ ಮತ್ತು ವರ್ಲಿ ಭಾಗಗಳಲ್ಲೂ ಕಾರು ಹಾಗೂ ರಸ್ತೆಗಳ ಮೇಲೆ ಮರಗಳು ಬಿದ್ದಿದ್ದು, ಕೆಲವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಇನ್ನು ಮುಂಬೈ ವಿಮಾನ ನಿಲ್ದಾಣದಲ್ಲೂ ಭಾರೀ ಮಳೆಯಿಂದಾಗಿ ಸುಮಾರು ಒಂದು ಗಂಟೆಗಳ ಕಾಲ ವಿಮಾನಗಳ ಹಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು.