ಕೋಲ್ಕತ್ತ: ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ನಡೆದ ವಿದ್ಯಾರ್ಥಿಗಳ ಪ್ರತಿಭಟನಾ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಕ್ಷೇಪಾರ್ಹ ಕಾರ್ಟೂನ್ ಹೊಂದಿರುವ ಪೋಸ್ಟರ್ ಪ್ರದರ್ಶಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಶ್ರೀಲೇಖಾ ಮಿತ್ರಾ ಅವರನ್ನು ಕಲ್ಕತ್ತ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಪ್ರಧಾನಿ ಕುರಿತು ಆಕ್ಷೇಪಾರ್ಹ ಪೋಸ್ಟರ್ ಪ್ರದರ್ಶಿಸಿರುವುದನ್ನು ಹೈಕೋರ್ಟ್ ‘ಅಸಹ್ಯಕರ ಕೃತ್ಯ’ ಎಂದು ಬಣ್ಣಿಸಿದ್ದು, ಘಟನೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಆದರೆ, ಇದೇ ವೇಳೆ ಶ್ರೀಲೇಖಾ ವಿರುದ್ಧ ಬಲವಂತದ ಪೊಲೀಸ್ ಕ್ರಮ ಕೈಗೊಳ್ಳದಂತೆ ಮಧ್ಯಂತರ ರಕ್ಷಣೆ ನೀಡಿದೆ. ಜುಲೈ 24ರಂದು ಆಗಿನ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಕೋಲ್ಕತ್ತದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದರು. ನಗರದ ಎಸ್‌ಪ್ಲನೇಡ್ ಪ್ರದೇಶದಲ್ಲಿ ನಡೆದ ಪ್ರತಿಭಟನೆಯಲ್ಲಿ ನಟಿ ಶ್ರೀಲೇಖಾ ಮಿತ್ರಾ ಭಾಗವಹಿಸಿದ್ದರು.
ಈ ವೇಳೆ ಪ್ರಧಾನಿ ಮೋದಿ ಅವರ ಕಾರ್ಟೂನ್ ಹೊಂದಿರುವ ಪೋಸ್ಟರ್ ಹಿಡಿದು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದ್ದರು ಎನ್ನಲಾಗಿದೆ. ಈ ಘಟನೆ ಖಂಡಿಸಿ ಪಶ್ಚಿಮ ಬಂಗಾಳದ ವಿವಿಧ ಪೊಲೀಸ್ ಠಾಣೆಗಳಲ್ಲಿ ಶ್ರೀಲೇಖಾ ವಿರುದ್ಧ ಒಟ್ಟು 16 ಎಫ್‌ಐಆರ್‌ಗಳು ದಾಖಲಾಗಿದ್ದವು. ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರಿ ಶ್ರೀಲೇಖಾ ಮಿತ್ರಾ ಕಲ್ಕತ್ತ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೌಗತ ಭಟ್ಟಾಚಾರ್ಯ, ಪೋಸ್ಟರ್‌ನಲ್ಲಿದ್ದ ಕಾರ್ಟೂನ್ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
“ಇದು ಅಸಹ್ಯಕರ ಕೃತ್ಯ. ಕಾರ್ಟೂನ್‌ನ ಸ್ವರೂಪವನ್ನು ನೋಡಿ ಮನಸ್ಸಿಗೆ ಆಘಾತವಾಯಿತು. ದೇಶದ ಯಾವುದೇ ಪ್ರಜೆ ಈ ರೀತಿಯ ವರ್ತನೆ ತೋರಬಾರದು,” ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು. ಶ್ರೀಲೇಖಾ ವಿರುದ್ಧ ದಾಖಲಾಗಿರುವ ಎಲ್ಲಾ ಕ್ರಿಮಿನಲ್ ಪ್ರಕರಣಗಳನ್ನು ಒಟ್ಟುಗೂಡಿಸಿ, ಕೋಲ್ಕತ್ತದ ಆನಂದಪುರ ಪೊಲೀಸ್ ಠಾಣೆಯ ಮೂಲಕ ತನಿಖೆ ನಡೆಸುವಂತೆ ಹೈಕೋರ್ಟ್ ನಿರ್ದೇಶಿಸಿದೆ.
ಇದೇ ವೇಳೆ, ಡಿಸೆಂಬರ್ 24ರವರೆಗೆ ನ್ಯಾಯಾಲಯದ ಅನುಮತಿಯಿಲ್ಲದೆ ಅರ್ಜಿದಾರರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳಬಾರದು ಎಂದು ಕೋರ್ಟ್ ಆದೇಶಿಸಿದೆ. ಆದರೆ, ಶ್ರೀಲೇಖಾ ತನಿಖೆಗೆ ಸಂಪೂರ್ಣ ಸಹಕಾರ ನೀಡಿದರೆ ಮಾತ್ರ ಈ ಮಧ್ಯಂತರ ರಕ್ಷಣೆ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದೆ. ವಿಚಾರಣೆಗೆ ಹಾಜರಾಗುವಂತೆ ಶ್ರೀಲೇಖಾಗೆ ತನಿಖಾಧಿಕಾರಿಗಳು ಕನಿಷ್ಠ 48 ಗಂಟೆಗಳ ಮುಂಚಿತವಾಗಿ ನೋಟಿಸ್ ನೀಡಬೇಕು ಎಂದು ಕೋರ್ಟ್ ಸೂಚಿಸಿದೆ. ಅಲ್ಲದೆ, ಡಿಸೆಂಬರ್ 14ರಂದು ತನಿಖಾ ವರದಿಯನ್ನು ಸಲ್ಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ.