ಕೋಲ್ಕತ್ತಾ: ಪಶ್ಚಿಮ ಬಂಗಾಳದ ಉತ್ತರ ಕೋಲ್ಕತ್ತಾದ ದುರ್ಗಾ ಪೂಜಾ ಪೆಂಡಾಲ್ನಲ್ಲಿ ಶನಿವಾರ ಭೀಕರ ದುರಂತ ಸಂಭವಿಸಿದೆ. ಚೋರ್ ಬಗಾನ್ ಸಾರ್ವಜನಿಕ ಪೂಜಾ ಪೆಂಡಾಲ್ನಲ್ಲಿ ಉಂಟಾದ ನೂಕುನುಗ್ಗಲಿನಲ್ಲಿ ಕನಿಷ್ಠ 17 ಮಂದಿ ಮೃತಪಟ್ಟಿದ್ದು, 25ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಹಾಗೂ ರಾಜ್ಯದ ಮುಖ್ಯ ಕಾರ್ಯದರ್ಶಿ ಮನೋಜ್ ಅಗರ್ವಾಲ್ ಅವರು ಪರಿಸ್ಥಿತಿಯನ್ನು ಪರಿಶೀಲಿಸಲು ಕೋಲ್ಕತ್ತಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುಗಳ ಆರೋಗ್ಯ ಸ್ಥಿತಿಯ ಕುರಿತು ಮಾಹಿತಿ ಪಡೆಯಲಾಗಿದೆ.
ನೂಕುನುಗ್ಗಲಿನ ಘಟನೆಯ ಬಗ್ಗೆ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ಆಘಾತ ಮತ್ತು ದುಃಖ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಚೋರ್ ಬಗಾನ್ ಪೂಜಾ ಪೆಂಡಾಲ್ನಲ್ಲಿ ನಡೆದ ದುರಂತದ ಸುದ್ದಿ ತಿಳಿದು ತೀವ್ರ ನೋವಾಗಿದೆ. ಗಾಯಗೊಂಡವರೆಲ್ಲರೂ ಶೀಘ್ರ ಗುಣಮುಖರಾಗಲಿ ಎಂದು ತಾಯಿ ದುರ್ಗೆಯಲ್ಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.
ಇನ್ನು, ಘಟನೆಯ ಪ್ರತ್ಯಕ್ಷದರ್ಶಿಯೊಬ್ಬರು ಸುದ್ದಿ ಸಂಸ್ಥೆ ಎಎನ್ಐಗೆ ಮಾಹಿತಿ ನೀಡಿದ್ದು, ನೂಕುನುಗ್ಗಲಿನ ಸಂದರ್ಭದಲ್ಲಿ ಅನೇಕರು ಪ್ರಜ್ಞೆ ತಪ್ಪಿದ್ದರು ಎಂದು ಹೇಳಿದ್ದಾರೆ. ಗಾಯಗೊಂಡವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಸೂಕ್ತ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ಹಲವರನ್ನು ಮೋಟಾರ್ಸೈಕಲ್ಗಳ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ತಿಳಿಸಿದ್ದಾರೆ.