ಬೆಂಗಳೂರು: ಬಿಗ್ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಮಲ್ಲಮ್ಮ ಅವರಿಗೆ ಬೆಂಬಲವಾಗಿ ನಿಂತಿದ್ದ ಖ್ಯಾತ ವಸ್ತ್ರ ವಿನ್ಯಾಸಕಿ ಹಾಗೂ ‘ರಿಷಿ ಡಿಸೈನ್’ ಸಂಸ್ಥೆಯ ಮಾಲಕಿ ಪಲ್ಲವಿ ಲಕ್ಷ್ಮೀಕಾಂತ್ ಅವರು ಹಠಾತ್ತನೆ ನಿಧನರಾಗಿದ್ದಾರೆ. ಭಾನುವಾರ ಪಲ್ಲವಿ ಅವರು ನಿಧನ ಹೊಂದಿದ್ದು, ಸಾವಿನ ಕಾರಣ ಇನ್ನೂ ತಿಳಿದುಬಂದಿಲ್ಲ. ಅವರ ನಿಧನದ ಸುದ್ದಿ ಕಿರುತೆರೆ ಹಾಗೂ ಫ್ಯಾಷನ್ ಲೋಕಕ್ಕೆ ಆಘಾತ ಮೂಡಿಸಿದೆ.
ಬಿಗ್ಬಾಸ್ ಕನ್ನಡ ಸೀಸನ್ 12ರಲ್ಲಿ ಮೂರನೇ ಸ್ಪರ್ಧಿಯಾಗಿ ಪ್ರವೇಶಿಸಿದ್ದ ಮಲ್ಲಮ್ಮ, ತಮ್ಮ ಮುಗ್ಧ ನಡವಳಿಕೆ ಹಾಗೂ ಆಟದ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು. ಬಿಗ್ಬಾಸ್ ಮನೆಯಲ್ಲಿ ಇದ್ದಷ್ಟು ದಿನ ಉತ್ತಮವಾಗಿ ಆಟವಾಡಿದ್ದ ಅವರು, ಮನರಂಜನೆಯ ಮೂಲಕವೂ ಜನಮನ ಗೆದ್ದಿದ್ದರು. ಎವಿಕ್ಟ್ ಆದ ಸಂದರ್ಭದಲ್ಲಿ ಅವರನ್ನು ಗೌರವಯುತವಾಗಿ ಬೀಳ್ಕೊಡಲಾಗಿತ್ತು.
ಮಲ್ಲಮ್ಮ ಬಿಗ್ಬಾಸ್ ಮನೆ ಪ್ರವೇಶಿಸುವ ಹಿಂದೆ ಪಲ್ಲವಿ ಲಕ್ಷ್ಮೀಕಾಂತ್ ಅವರ ಪ್ರಮುಖ ಪಾತ್ರವಿತ್ತು ಎನ್ನಲಾಗಿದೆ. ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಬಂದಿದ್ದ ಮಲ್ಲಮ್ಮ ಅವರಿಗೆ ಪಲ್ಲವಿ ಅವರು ಉಳಿದುಕೊಳ್ಳಲು ಜಾಗ ಕಲ್ಪಿಸುವುದರ ಜೊತೆಗೆ, ತಮ್ಮ ಬೊಟಿಕ್ನಲ್ಲೇ ಕೆಲಸವನ್ನೂ ನೀಡಿದ್ದರು. ಉದ್ಯೋಗಿಯಂತೆ ಮಾತ್ರವಲ್ಲದೆ, ಮನೆಯ ಸದಸ್ಯೆಯಂತೆ ಮಲ್ಲಮ್ಮ ಅವರನ್ನು ಪಲ್ಲವಿ ಪ್ರೀತಿಯಿಂದ ನೋಡಿಕೊಂಡಿದ್ದರು.
ಕಿರುತೆರೆ ನಟ ಮನೋಜ್ ಕುಮಾರ್ ಅವರೊಂದಿಗೆ ಪಲ್ಲವಿ ಲಕ್ಷ್ಮೀಕಾಂತ್ ಅವರು ಮಲ್ಲಮ್ಮ ಬಿಗ್ಬಾಸ್ ವೇದಿಕೆ ತಲುಪಲು ಬೆಂಬಲವಾಗಿ ನಿಂತಿದ್ದರು. ಮಲ್ಲಮ್ಮ ಬಿಗ್ಬಾಸ್ ಮನೆಗೆ ಪ್ರವೇಶಿಸಿದ ಸಂದರ್ಭದಲ್ಲೂ, ಬಳಿಕ ಮನೆಯಿಂದ ಹೊರಬಂದ ಸಂದರ್ಭದಲ್ಲೂ ಕಿಚ್ಚ ಸುದೀಪ್ ಅವರು ಪಲ್ಲವಿ ಅವರ ಬೆಂಬಲ ಹಾಗೂ ನಿಸ್ವಾರ್ಥ ಸಹಾಯವನ್ನು ಸ್ಮರಿಸಿದ್ದರು.
ಬಿಗ್ಬಾಸ್ ಮನೆಯಿಂದ ಹೊರಬಂದ ಬಳಿಕ ಹಲವು ಸಂದರ್ಶನಗಳಲ್ಲಿ ಮಲ್ಲಮ್ಮ ಅವರು ‘ಪಲ್ಲವಿ ಮೇಡಂ’ ಬಗ್ಗೆ ಹೆಮ್ಮೆ ಹಾಗೂ ಕೃತಜ್ಞತೆಯಿಂದ ಮಾತನಾಡಿದ್ದರು. ಇದೀಗ ತಮ್ಮನ್ನು ಬಿಗ್ಬಾಸ್ ವೇದಿಕೆಗೆ ತಲುಪಿಸಲು ನೆರವಾದ ಪಲ್ಲವಿ ಅವರ ನಿಧನದ ಸುದ್ದಿ ಮಲ್ಲಮ್ಮ ಅವರಿಗೆ ತೀವ್ರ ಆಘಾತ ತಂದಿದೆ ಎನ್ನಲಾಗಿದೆ.
ಪಲ್ಲವಿ ಲಕ್ಷ್ಮೀಕಾಂತ್ ಅವರು ಕೇವಲ ಬೊಟಿಕ್ ಮಾಲೀಕರಷ್ಟೇ ಅಲ್ಲದೆ, ಸ್ಯಾಂಡಲ್ವುಡ್ನ ಹಲವು ನಟ-ನಟಿಯರು ಹಾಗೂ ಗಣ್ಯರಿಗೆ ವಸ್ತ್ರ ವಿನ್ಯಾಸ ಮಾಡುತ್ತಿದ್ದ ಖ್ಯಾತ ಡಿಸೈನರ್ ಆಗಿದ್ದರು. ‘ರಿಷಿ ಡಿಸೈನ್’ ಮೂಲಕ ಫ್ಯಾಷನ್ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿದ್ದರು. ಪಲ್ಲವಿ ಅವರ ನಿಧನದ ಸುದ್ದಿ ಹೊರಬೀಳುತ್ತಿದ್ದಂತೆ ಚಿತ್ರರಂಗ, ಕಿರುತೆರೆ ಹಾಗೂ ಫ್ಯಾಷನ್ ಕ್ಷೇತ್ರದ ಗಣ್ಯರು, ಆಪ್ತರು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ.