Search


ಅಮರ ಪ್ರೇಮ; ಮೃತ ಪತ್ನಿಯ ನೆನಪಲ್ಲಿ ಆಕೆಯ ಪಕ್ಕದಲ್ಲೇ ಸಮಾಧಿ ನಿರ್ಮಿಸಿಕೊಂಡ ಪತಿ

ಆಂದ್ರಪ್ರದೇಶ : ಜಗತ್ತಿನಲ್ಲಿ ಪ್ರೇಮಕಾವ್ಯಗಳಿಗೇನು ಕೊರತೆಯಿಲ್ಲ, ಷಹಜಾನ್‌ ಎಂಬಾತ ತನ್ನ ಹೆಂಡತಿಗಾಗಿ ತಾಜ್‌ಮಹಲ್‌ ಕಟ್ಟಿಸಿದರೆ, ದಶರಥ್‌ ಮಾಂಜಿ ಎಂಬಾತ ತನ್ನ ಹೆಂಡತಿಯ ಸಾವಿಗೆ ಕಾರಣವಾದ ಬೆಟ್ಟವನ್ನೇ ಕಡಿದು ಪುಡಿ ಮಾಡಿದ್ದ. ಆದರೆ ಜಗತ್ತು ಆಧುನಿಕತೆಯೆಡೆಗೆ ಮರಳುತ್ತ ಸಂಬಂಧಗಳ ಸ್ವರೂಪ ಬದಲಾಗತೊಡಗಿತು. ಏಳೇಳು ಜನ್ಮ ಜೊತೆಯಾಗಿ ಬಾಳೋಣ ಎಂದು ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದ ದಂಪತಿಗಳು ವರ್ಷ ಕಳೆಯುವುದರೊಳಗೆ ಡಿವೋರ್ಸ್‌ಗಾಗಿ ಕೋರ್ಟ್‌ ಮೆಟ್ಟಿಲೇರಿದ ಘಟನೆಗಳು ಸಾಕಷ್ಟಿವೆ, ಆದರೆ ಆಂದ್ರಪ್ರದೇಶದ ಕಡಪದಲ್ಲಿ ವ್ಯಕ್ತಿಯೋರ್ವ ಮೃತಪಟ್ಟ ಪತ್ನಿಯ ಮೇಲಿನ ಪ್ರೀತಿಗಾಗಿ ಆಕೆಯ ಸಮಾಧಿಯ ಪಕ್ಕದಲ್ಲಿ ಬದುಕಿರುವಾಗಲೆ ತನಗಾಗಿಯೂ ಒಂದು ಸಮಾಧಿಯನ್ನು ನಿರ್ಮಿಸಿಕೊಂಡಿದ್ದಾರೆ.

ಹೌದು.... ಆಂಧ್ರಪ್ರದೇಶದ ಕಡಪ ಜಿಲ್ಲೆಯ ಚಿನ್ನ ಚೌಕ್‌ನ ಸಹಕಾರಿ ಕಾಲೋನಿ ನಿವಾಸಿ ಪಿ. ರಾಮಮೋಹನ್ ರಾಜು ಎಂಬುವವರು ತಮ್ಮ ಪತ್ನಿಯ ಮೇಲಿನ ಪ್ರೀತಿಯಿಂದ ಸ್ಮಶಾಣದಲ್ಲಿ ಸಮಾಧಿ ನಿರ್ಮಿಸಿಕೊಂಡಿದ್ದಾರೆ. ಇವರ ಹಿನ್ನಲೆಯ ಬಗ್ಗೆ ನೋಡುವುದಾದರೆ. ನಿವೃತ್ತ ಸರ್ಕಾರಿ ಉದ್ಯೋಗಿಯಾದ ಪಿ. ರಾಮಮೋಹನ್ ರಾಜು ಅವರು ಭವಿಷ್ಯ ನಿಧಿ (PF) ಕಚೇರಿಯಲ್ಲಿ ಅಧಿಕಾರಿಯಾಗಿ ಹಾಗೂ ಆಂಧ್ರಪ್ರದೇಶದ ವೈದ್ಯಕೀಯ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದವರು. ಇವರಿಗೂ ಮತ್ತು ರಾಜ್ಯಲಕ್ಷ್ಮಿ ಅವರಿಗೂ 1978 ರಲ್ಲಿ ವಿವಾಹವಾಗಿತ್ತು. ಈ ದಂಪತಿಗೆ ನಾಲ್ಕು ಜನ ಹೆಣ್ಣು ಮಕ್ಕಳಿದ್ದಾರೆ. ಸುಮಾರು 33 ವರ್ಷಗಳ ಕಾಲ ಅತ್ಯಂತ ಸಾಮರಸ್ಯದಿಂದ ಸಂಸಾರ ನಡೆಸಿದ ಈ ಜೋಡಿಗೆ ವಿಧಿ 2011 ರಲ್ಲಿ ಕ್ರೂರ ಆಘಾತ ನೀಡಿತು. ರಾಮಮೋಹನ್ ಅವರ ಪತ್ನಿ ರಾಜ್ಯಲಕ್ಷ್ಮಿ ಕ್ಯಾನ್ಸರ್ ಕಾಯಿಲೆಯಿಂದಾಗಿ ನಿಧನರಾದರು.

ಪತ್ನಿ ತೀರಿಕೊಂಡ ನಂತರ ಮಕ್ಕಳ ಸಮ್ಮುಖದಲ್ಲಿ ಆಕೆಯ ಅಂತ್ಯಕ್ರಿಯೆ ನಡೆಸಿ, ಸಮಾಧಿ ನಿರ್ಮಿಸಲಾಯಿತು. ಆದರೆ, ಅರ್ಧಾಂಗಿಯ ಅಗಲಿಕೆಯನ್ನು ರಾಮಮೋಹನ್ ರಾಜು ಅವರಿಗೆ ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಹೆಂಡತಿಯಿಲ್ಲದ ಜೀವನ ಅವರಿಗೆ ಶೂನ್ಯವೆನಿಸಿತು. ಸಾವು ನಮ್ಮನ್ನು ಕೇವಲ ದೈಹಿಕವಾಗಿ ಮಾತ್ರ ಬೇರ್ಪಡಿಸಿದೆ, ಆದರೆ ತನ್ನ ಆತ್ಮ ಸದಾ ಆಕೆಯೊಂದಿಗೇ ಇರಬೇಕೆಂದು ಅವರು ಬಯಸಿದರು. ಅದಕ್ಕಾಗಿಯೇ ಅವರು ಒಂದು ವಿಭಿನ್ನ ಹಾಗೂ ಭಾವನಾತ್ಮಕ ನಿರ್ಧಾರಕ್ಕೆ ಬಂದರು.

ರಾಮಮೋಹನ್ ರಾಜು ನೇರವಾಗಿ ಸ್ಮಶಾನದ ವ್ಯವಸ್ಥಾಪಕರನ್ನು ಸಂಪರ್ಕಿಸಿದರು. ನನ್ನ ಪತ್ನಿಯ ಸಮಾಧಿಯ ಪಕ್ಕದಲ್ಲೇ ನನಗೂ ಸ್ವಲ್ಪ ಜಾಗವನ್ನು ನೀಡಿ, ನಾನು ಬದುಕಿರುವಾಗಲೇ ನನಗಾಗಿ ಅಲ್ಲಿ ಸಮಾಧಿಯನ್ನು ನಿರ್ಮಿಸಿಕೊಳ್ಳುತ್ತೇನೆ ಎಂದು ವಿನಂತಿಸಿದರು. ಅವರ ಅಪರಿಮಿತ ಪ್ರೀತಿಯನ್ನು ಕಂಡು ಮನಕರಗಿದ ಸ್ಮಶಾನದ ಆಡಳಿತ ಮಂಡಳಿ ಅದಕ್ಕೆ ಒಪ್ಪಿಗೆ ನೀಡಿತು. ತಕ್ಷಣವೇ ಅವರು ತಮಗಾಗಿ ಹೆಂಡತಿಯ ಸಮಾಧಿಯ ಪಕ್ಕದಲ್ಲೇ ಮತ್ತೊಂದು ಸಮಾಧಿಯನ್ನು ನಿರ್ಮಿಸಿಕೊಂಡರು.

ಕೇವಲ ಸಮಾಧಿ ನಿರ್ಮಿಸುವುದಷ್ಟೇ ಅಲ್ಲ, ತಾವು ಮರಣ ಹೊಂದಿದ ನಂತರ ಯಾವುದೇ ಅಡೆತಡೆಯಿಲ್ಲದೆ ಹೆಂಡತಿಯ ಪಕ್ಕದಲ್ಲೇ ತನ್ನನ್ನು ಮಲಗಿಸಬೇಕು ಎಂದು ತಮ್ಮ ನಾಲ್ಕು ಹೆಣ್ಣುಮಕ್ಕಳನ್ನು ಒಪ್ಪಿಸಿ, ಅದಕ್ಕಾಗಿ ತಮ್ಮ ಪಿಂಚಣಿ ಹಣದಿಂದ ಬರೋಬ್ಬರಿ 4 ಲಕ್ಷ ರೂಪಾಯಿಗಳನ್ನು ತೆಗೆದಿಟ್ಟಿದ್ದಾರೆ. ಇದಲ್ಲದೆ, ತಾವು ಸತ್ತ ನಂತರ ತಮ್ಮ ಅಂತ್ಯಕ್ರಿಯೆಯು ಯಾವುದೇ ಅಳುಕಿಲ್ಲದೆ, ಸಾಂಪ್ರದಾಯಿಕ ಸಮಾರಂಭದಂತೆ ಸಾಗಬೇಕು ಎಂದು ತಮ್ಮ ಆಪ್ತ ಸ್ನೇಹಿತರೊಬ್ಬರಿಗೆ 50 ಸಾವಿರ ರೂಪಾಯಿಗಳನ್ನು ಮುಂಗಡವಾಗಿ ನೀಡಿ ಜವಾಬ್ದಾರಿ ವಹಿಸಿದ್ದಾರೆ.
 

By thebigbulletin.com - 19-05-2026


Ads in Post