Search


ಸಾಲಗಾರನಾಗಿರ್ತೀನಿ, ಮೋಸಗಾರನಾಗಲ್ಲ: 88 ಲಕ್ಷ ಸಾಲದ ಬಗ್ಗೆ ಅವಿನಾಶ್ ಭಾವುಕ ಮಾತು

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 13ರ ಮನೆಯಿಂದ ಮೂರನೇ ವಾರ ಎಲಿಮಿನೇಟ್ ಆಗಿ ಹೊರಬಂದಿರುವ ಸ್ಪರ್ಧಿ ಅವಿನಾಶ್ ಅವರು ತಮ್ಮ ವೈಯಕ್ತಿಕ ಜೀವನದ ಕುರಿತು ಶಾಕಿಂಗ್ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ತಮ್ಮ ಮೇಲಿರುವ ಸಾಲದ ಮೊತ್ತದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಇದು ಅಭಿಮಾನಿಗಳ ಗಮನ ಸೆಳೆದಿದೆ.

‘ನೀವು ಬಿಗ್ ಬಾಸ್ ವಿನ್ನರ್ ಆಗಿ 50 ಲಕ್ಷ ರೂಪಾಯಿ ಗೆದ್ದಿದ್ದರೆ ಆ ಹಣವನ್ನು ಏನು ಮಾಡುತ್ತಿದ್ದಿರಿ?’ ಎಂಬ ಪ್ರಶ್ನೆಗೆ ಉತ್ತರಿಸಿದ ಅವಿನಾಶ್, ಗೆದ್ದಿದ್ದರೆ ಆ ಸಂಪೂರ್ಣ ಹಣವನ್ನು ಸಾಲ ತೀರಿಸಲು ಬಳಸುತ್ತಿದ್ದೆ ಎಂದು ಹೇಳಿದ್ದಾರೆ. ಇದೇ ವೇಳೆ ತಮ್ಮ ಮೇಲಿರುವ ಸಾಲದ ಮೊತ್ತವು ಬಿಗ್ ಬಾಸ್ ಗೆಲುವಿನ ಬಹುಮಾನಕ್ಕಿಂತಲೂ ಹೆಚ್ಚಿದೆ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.

ತಮ್ಮ ಸಾಲದ ಮೊತ್ತದ ಬಗ್ಗೆ ನೇರವಾಗಿ ಮಾತನಾಡಿದ ಅವಿನಾಶ್, ‘ನನಗೆ ಬರೋಬ್ಬರಿ 88 ಲಕ್ಷ ರೂಪಾಯಿ ಸಾಲವಿದೆ’ ಎಂದು ತಿಳಿಸಿದ್ದಾರೆ. ತಾವು ಸಿನಿಮಾ ಮಾಡಿದ್ದು, ಆ ಸಿನಿಮಾ ಸದ್ಯ ತಮ್ಮ ಕೈಯಲ್ಲಿದೆ. ಚಿತ್ರವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಿ, ಅದರಿಂದ ಬರುವ ಹಣದ ಮೂಲಕ ಸಾಲವನ್ನು ತೀರಿಸುವ ಭರವಸೆಯಲ್ಲಿರುವುದಾಗಿ ಅವರು ಹೇಳಿದ್ದಾರೆ.

ಸಾಲ ನೀಡಿದವರು ಹಲವು ವರ್ಷಗಳಿಂದ ಹಣಕ್ಕಾಗಿ ಕಾಯುತ್ತಿದ್ದಾರೆ ಎಂದು ಹೇಳಿದ ಅವಿನಾಶ್, ತಮ್ಮ ಪರಿಸ್ಥಿತಿಯ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ. ‘ನಾನು ಸಾಲಗಾರ ಎಂಬ ಪಟ್ಟವನ್ನು ಬೇಕಾದರೆ ಅನುಭವಿಸಬಹುದು. ಆದರೆ ಮೋಸಗಾರ ಅಥವಾ ನಂಬಿಕೆ ದ್ರೋಹಿ ಎಂಬ ಪಟ್ಟವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ’ ಎಂದು ಹೇಳುವ ಮೂಲಕ ಸಾಲ ನೀಡಿದವರಿಗೆ ಹಣ ಮರಳಿಸುವ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದ್ದಾರೆ.

ಅವಿನಾಶ್ ಅವರು ಕೆಲವು ಸಿನಿಮಾಗಳಲ್ಲಿ ನಟಿಸಿದ್ದು, ನಿಧನರಾದ ನಿರ್ದೇಶಕ ಗುರುಪ್ರಸಾದ್ ಅವರ ಶಿಷ್ಯವೃಂದದಲ್ಲಿ ಗುರುತಿಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಮಂಜು ಹಾಗೂ ಕಿರಣ್ ಶಾಸ್ತ್ರಿ ಅವರ ಮಾತುಗಳಿಂದ ಬೇಸರಗೊಂಡು ಮನೆಯಿಂದ ಹೊರಬರಲು ನಿರ್ಧರಿಸಿದ್ದ ಅವರು, ಬಳಿಕ ತಮ್ಮ ನಿರ್ಧಾರವನ್ನು ಬದಲಿಸಿಕೊಂಡಿದ್ದರು. ಇದೀಗ ಮೂರನೇ ವಾರದಲ್ಲೇ ಎಲಿಮಿನೇಟ್ ಆಗಿರುವ ಅವಿನಾಶ್, ಸಿನಿಮಾ ಬಿಡುಗಡೆಯ ಬಳಿಕ ದೊರೆಯುವ ಆದಾಯದಿಂದ 88 ಲಕ್ಷ ರೂಪಾಯಿ ಸಾಲ ತೀರಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

By Ravikumar - 30-09-2026


Ads in Post