ನವದೆಹಲಿ: ಕೆಂಪುಕೋಟೆ ಮೇಲೆ ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣದ ಕುರಿತು ಆಮ್ ಆದ್ಮಿ ಪಾರ್ಟಿಯ ನಾಯಕ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯೆ ನೀಡಿದ್ದಾರೆ. ʻನಾನೂ ಕೂಡ ಧಿಮಾಗಿ ನಕ್ಸಲ್ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇನೆ ಎಂದು ಹೇಳಿದ್ದಾರೆ.
ಸ್ವತಂತ್ರ್ಯ ದಿನಾಚರಣೆ ಪ್ರಯುಕ್ತ ಕೆಂಪು ಕೋಟೆ ಮೇಲೆ ದೇಶವನ್ನೂದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ "ಈ ದಿಮಾಗಿ ನಕ್ಸಲರು ಯುವಕರ ತಲೆಗೆ ತಪ್ಪು ಕಲ್ಪನೆಗಳನ್ನು ತುಂಬಿ ದೇಶದ ಅಭಿವೃದ್ಧಿಗೆ ಅಡ್ಡಿಪಡಿಸುತ್ತಾರೆ. ಇವರು ಸಮಾಜದ ಮುಖ್ಯವಾಹಿನಿಯಲ್ಲಿ ಅಥವಾ ಅಧಿಕಾರದ ಆಯಕಟ್ಟಿನ ಜಾಗಗಳಲ್ಲಿ ಕುಳಿತುಕೊಂಡು ಅದೇ ರೀತಿಯ ಹಿಂಸಾತ್ಮಕ, ಒಡೆದು ಆಳುವ ಮತ್ತು ವಿಧ್ವಂಸಕ ಸಿದ್ಧಾಂತಗಳನ್ನು ಪ್ರಚಾರ ಮಾಡುತ್ಥಾರೆ ಎಂದು ಹೇಳಿದ್ದರು. ಈ ಹೇಳಿಕೆ ಇದೀಗ ತೀವ್ರ ವಿವಾಧಕ್ಕೆ ಕಾರಣವಾಗಿದೆ.
ಈ ಹೇಳಿಕೆಗೆ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಎಕ್ಸ್ನಲ್ಲಿ ವಿಡಿಯೋ ಬಿಡುಗಡೆ ಮಾಡಿ ತಿರುಗೇಟು ನೀಡಿದ್ದಾರೆ " ನಾನು ನಿಜವಾದ ದೇಶಭಕ್ತನಾಗಿದ್ದೇನೆ. ಭಾರತದ ವಿರುದ್ಧ ಯಾರೇ ಮಾತನಾಡಿದರೂ ನಾನು ಅದನ್ನು ಪೂರ್ಣ ಬಲದಿಂದ ವಿರೋಧಿಸುತ್ತೇನೆ. ಬಿಜೆಪಿಗೆ ಹೆದರುವುದಿಲ್ಲ ಎಂದಿದ್ದಾರೆ. ಜೊತೆಗೆ ಪ್ರಧಾನಿ ಮೋದಿಯವರ ಪ್ರಕಾರ, ಸರ್ಕಾರವನ್ನು ಪ್ರಶ್ನಿಸುವ ಧೈರ್ಯ ತೋರುವವರು ಮತ್ತು ಬಿಜೆಪಿಗೆ ಹೆದರದವರೆಲ್ಲರೂ ದಿಮಾಗಿ ನಕ್ಸಲರು. ಇಂದು ಭಗತ್ ಸಿಂಗ್ ಅಥವಾ ಡಾ. ಬಿ.ಆರ್. ಅಂಬೇಡ್ಕರ್ ಅವರು ಬದುಕಿದ್ದರೆ ಪ್ರಧಾನಿಯವರ ಪ್ರಕಾರ ಅವರನ್ನೂ ದಿಮಾಗಿ ನಕ್ಸಲರು(Dimagi Naxal) ಎಂದೇ ಕರೆಯಲಾಗುತ್ತಿತ್ತು ಎಂದು ಕುಟುಕಿದರು
ಭ್ರಷ್ಟಾಚಾರ ಮುಕ್ತ ವ್ಯವಸ್ಥೆ, ಉತ್ತಮ ಚರಂಡಿ ವ್ಯವಸ್ಥೆ ಮತ್ತು ಉತ್ತಮ ಆಸ್ಪತ್ರೆಗಳಂತಹ ಮೂಲಭೂತ ಸೌಲಭ್ಯಗಳನ್ನು ಬಯಸುವ ಪ್ರತಿಯೊಬ್ಬ ನಾಗರಿಕರನ್ನು ಮೋದಿ ಅವರು ‘ದಿಮಾಗಿ ನಕ್ಸಲರುʼ ಎನ್ನುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಕೂಡ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು, “ನಾನು ಕೂಡ ‘ದಿಮಾಗಿ ನಕ್ಸಲ್’ ಎಂದು ಹೇಳಿಕೊಳ್ಳಲು ಹೆಮ್ಮೆಪಡುತ್ತೇನೆ” ಎಂದು ಹೇಳಿದ್ದರು.