Search


ಹೆಂಡತಿ ಕೈಕೊಟ್ಟ ನಂತರ ನಾನು ದೇವದಾಸನಾಗಿದ್ದೆ; ವಿಚ್ಚೇದನದ ಬಗ್ಗೆ ಮನಬಿಚ್ಚಿ ಮಾತನಾಡಿದ ಚಾಹಲ್

ಭಾರತದ ಖ್ಯಾತ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ತಮ್ಮ ವೈಯಕ್ತಿಕ ಜೀವನದಲ್ಲಿ ಎದುರಿಸಿದ ಕಠಿಣ ಸಂದರ್ಭಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಮದ್ಯಪಾನದ ಚಟ ಮಿತಿಮೀರಿದ ಕಾರಣ ಪುನರ್ವಸತಿ ಕೇಂದ್ರಕ್ಕೆ ದಾಖಲಾಗಿದ್ದ ಅವರು, 26 ದಿನಗಳ ಕಾಲ ಅಲ್ಲಿಯೇ ಉಳಿದುಕೊಂಡಿದ್ದಾಗಿ ಬಹಿರಂಗಪಡಿಸಿದ್ದಾರೆ. ಭಾರತದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಚಾಹಲ್, ಮದ್ಯಪಾನದ ವ್ಯಸನ ಹಾಗೂ ವೈಯಕ್ತಿಕ ಜೀವನದ ಸಮಸ್ಯೆಗಳು ತಮ್ಮ ಮೇಲೆ ತೀವ್ರ ಪರಿಣಾಮ ಬೀರಿದ್ದವು ಎಂದು ತಿಳಿಸಿದ್ದಾರೆ.

ಮೊದಲ ಬಾರಿಗೆ ಐಪಿಎಲ್‌ನಲ್ಲಿ ಆಡಿದ ಸಂದರ್ಭದಲ್ಲಿ ಪಾರ್ಟಿಗಳಲ್ಲಿ ಭಾಗವಹಿಸುತ್ತಿದ್ದೆ. ಕ್ರಮೇಣ ಮದ್ಯಪಾನದ ಸಮಸ್ಯೆ ಹೆಚ್ಚಾಯಿತು. ವಿಚ್ಛೇದನದ ಬಳಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ಇದೇ ರೀತಿ ಮುಂದುವರಿದರೆ ತಮಗೆ ಅತ್ಯಂತ ಪ್ರಿಯವಾದ ಕ್ರಿಕೆಟ್ ವೃತ್ತಿಜೀವನವೇ ಹಾಳಾಗಬಹುದು ಎಂಬ ಅರಿವು ಮೂಡಿತು. ಹೀಗಾಗಿ ಮದ್ಯಪಾನದ ಚಟದಿಂದ ಹೊರಬರಲು ನಿರ್ಧರಿಸಿ ಪುನರ್ವಸತಿ ಕೇಂದ್ರಕ್ಕೆ ದಾಖಲಾಗಿದ್ದಾಗಿ ಚಾಹಲ್ ಹೇಳಿದ್ದಾರೆ.

 ವೈಯಕ್ತಿಕ ಜೀವನದ ಸಮಸ್ಯೆಗಳ ನಡುವೆ ಮಾನಸಿಕ ಒತ್ತಡವನ್ನೂ ಎದುರಿಸಬೇಕಾಯಿತು. ಆತಂಕ ಹೆಚ್ಚಾದಾಗ ಹೃದಯ ಬಡಿತ ವೇಗವಾಗುತ್ತಿತ್ತು. ಪ್ಯಾನಿಕ್ ಅಟ್ಯಾಕ್ ಉಂಟಾದಾಗ ಮುಖದ ಸ್ನಾಯುಗಳು ಸಂಕುಚಿತಗೊಂಡು, ತುಟಿಗಳು ಒಂದು ಬದಿಗೆ ಎಳೆಯಲ್ಪಟ್ಟಂತೆ ಆಗುತ್ತಿದ್ದವು. ಇದರಿಂದ ಮಾತನಾಡಲು ಕೂಡ ಕಷ್ಟವಾಗುತ್ತಿತ್ತು ಎಂದು ಚಾಹಲ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಸಾರ್ವಜನಿಕ ವ್ಯಕ್ತಿಯಾಗಿರುವುದರಿಂದ ವೈಯಕ್ತಿಕ ಜೀವನದ ಪ್ರತಿಯೊಂದು ಘಟನೆಯೂ ಚರ್ಚೆಗೆ ಗ್ರಾಸವಾಗಿದ್ದು, ಸಾಕಷ್ಟು ನೋವು ಅನುಭವಿಸಿದ್ದಾಗಿ ತಿಳಿಸಿದ್ದಾರೆ.

ಪುನರ್ವಸತಿ ಕೇಂದ್ರದಲ್ಲಿ 26 ದಿನ ಕಳೆದ ಬಳಿಕ ತಮ್ಮ ಜೀವನದಲ್ಲಿ ಮಹತ್ವದ ಬದಲಾವಣೆ ಕಂಡುಬಂದಿದೆ ಎಂದು ಚಾಹಲ್ ಹೇಳಿದ್ದಾರೆ. ಈ ಕಠಿಣ ಸಮಯದಲ್ಲಿ ಕುಟುಂಬದವರು, ಆಪ್ತ ಸ್ನೇಹಿತರು ಹಾಗೂ ಬಿಸಿಸಿಐನ ಮಾಜಿ ಖಜಾಂಚಿ ಅನಿರುದ್ಧ್ ಚೌಧರಿ ಬೆಂಬಲ ನೀಡಿದ್ದರು. ಈಗ ಭಾವನೆಗಳನ್ನು ನಿಯಂತ್ರಿಸುವುದನ್ನು ಕಲಿತಿದ್ದು, ಜಿಮ್, ಫೀಲ್ಡಿಂಗ್ ಅಭ್ಯಾಸ ಮತ್ತು ಕ್ರಿಕೆಟ್ ತರಬೇತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ದೇಹವೂ ಉತ್ತಮ ಸ್ಥಿತಿಯಲ್ಲಿದೆ. ಹಿಂದೆ ಎದುರಿಸಿದ ಸಮಸ್ಯೆಗಳನ್ನು ನಿಭಾಯಿಸಿ ಈಗ ಹೆಚ್ಚು ಸಂತೋಷದಿಂದ ಜೀವನ ನಡೆಸುತ್ತಿದ್ದೇನೆ ಎಂದು ಚಾಹಲ್ ತಿಳಿಸಿದ್ದಾರೆ.

By Ravikumar - 18-10-2026


Ads in Post