Search


ಮಂಜನನ್ನು ಮಾತ್ರ ಹೊರಹಾಕಿದ್ದು ನನಗೆ ಇಷ್ಟವಾಗಲಿಲ್ಲ: ಬಿಗ್ ಬಾಸ್ ನಿರ್ಧಾರಕ್ಕೆ ಸುದೀಪ್ ಅಸಮಾಧಾನ

ಬಿಗ್‌ಬಾಸ್ ಕನ್ನಡ ಸೀಸನ್ 13ರ ಮನೆಯಲ್ಲಿ ಅಚ್ಚರಿಯ ಬೆಳವಣಿಗೆಯಾಗಿದೆ. ಸಹ ಸ್ಪರ್ಧಿಗಳಿಗೆ ಪದೇಪದೇ ಅವಾಚ್ಯ ಪದಗಳಿಂದ ನಿಂದನೆ ಮಾಡುವುದು, ಎಚ್ಚರಿಕೆಗಳ ನಡುವೆಯೂ ನಿಯಮ ಉಲ್ಲಂಘಿಸುವುದು ಹಾಗೂ ಇತರ ಸ್ಪರ್ಧಿಗಳ ಚಾರಿತ್ರ್ಯಕ್ಕೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸಿದ ಆರೋಪದ ಹಿನ್ನೆಲೆಯಲ್ಲಿ ಮಾಡರ್ನ್ ಮಹಾಕವಿ ಮಂಜನನ್ನು ಬಿಗ್‌ಬಾಸ್ ಮನೆಯಿಂದ ನೇರವಾಗಿ ಹೊರಹಾಕಲಾಗಿದೆ. ಸಾಮಾನ್ಯವಾಗಿ ಭಾನುವಾರದ ಸಂಚಿಕೆಯಲ್ಲಿ ಸುದೀಪ್ ಅವರು ಎಲಿಮಿನೇಷನ್ ಘೋಷಿಸುತ್ತಾರೆ. ಆದರೆ ಈ ಬಾರಿ ಶನಿವಾರದ ಸಂಚಿಕೆ ಮುಗಿಯುತ್ತಿದ್ದಂತೆ ಮಂಜನನ್ನು ಮನೆಯಿಂದ ಹೊರಗೆ ಕಳುಹಿಸಲಾಗಿದೆ.

ಮಂಜ ಮನೆಯಿಂದ ಹೊರಬಂದ ಬಳಿಕ ಆರಂಭವಾದ ವೀಕೆಂಡ್ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಈ ವಿಚಾರವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಶನಿವಾರದ ಸಂಚಿಕೆಯಲ್ಲಿ ಗಂಭೀರವಾಗಿ ಕಾರ್ಯಕ್ರಮ ನಡೆಸಿಕೊಟ್ಟಿದ್ದ ಸುದೀಪ್, ಭಾನುವಾರದ ಸಂಚಿಕೆಯಲ್ಲೂ ಅದೇ ಧಾಟಿಯನ್ನು ಮುಂದುವರಿಸಿದರು. ಈ ವೇಳೆ ಮಾತನಾಡಿದ ಅವರು, ಮಂಜನನ್ನು ಮಾತ್ರ ಮನೆಯಿಂದ ಹೊರಹಾಕಿರುವುದು ತಮಗೆ ಇಷ್ಟವಾಗಲಿಲ್ಲ ಎಂದು ನೇರವಾಗಿ ಹೇಳಿದರು.

ಬಿಗ್‌ಬಾಸ್ ತನ್ನದೇ ಆದ ನಿಯಮಗಳ ಆಧಾರದ ಮೇಲೆ ನಿರ್ಧಾರ ಕೈಗೊಂಡಿದ್ದಾರೆ. ಆದರೆ ಮಂಜನ ಜೊತೆಗೆ ಇನ್ನೂ ಇಬ್ಬರು ಅಥವಾ ಮೂವರು ಸ್ಪರ್ಧಿಗಳನ್ನು ಮನೆಯಿಂದ ಹೊರಹಾಕಬೇಕಿತ್ತು ಎಂದು ಸುದೀಪ್ ಅಭಿಪ್ರಾಯಪಟ್ಟರು. ಒಂದು ವೇಳೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ತಮ್ಮ ಕೈಯಲ್ಲಿದ್ದು, ಈ ವೇದಿಕೆಯೇ ನ್ಯಾಯಾಲಯವಾಗಿದ್ದರೆ, ಮಂಜನ ಜೊತೆಗೆ ಇನ್ನೂ ಇಬ್ಬರನ್ನು ಹೊರಗೆ ಕಳುಹಿಸುತ್ತಿದ್ದೆ ಎಂದು ಅವರು ಹೇಳಿದರು.

ಬಿಗ್‌ಬಾಸ್ ನಿರ್ಧಾರದಲ್ಲಿ ತಮ್ಮ ಪಾತ್ರವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ ಸುದೀಪ್, ತಮಗೆ ನೀಡಿರುವ ಜವಾಬ್ದಾರಿ ಸ್ಪರ್ಧಿಗಳಿಗೆ ಎಚ್ಚರಿಕೆ ನೀಡುವುದು ಮತ್ತು ಬಿಗ್‌ಬಾಸ್ ಸೂಚಿಸಿರುವ ಹೆಸರನ್ನು ಘೋಷಿಸುವುದಷ್ಟೇ ಎಂದರು. ತಮ್ಮ ಅಭಿಪ್ರಾಯಗಳಿಗೆ ಕಾರ್ಯಕ್ರಮದಲ್ಲಿ ನಿರ್ಧಾರಾತ್ಮಕ ಅಧಿಕಾರವಿಲ್ಲ ಎಂದು ತಿಳಿಸಿದ ಅವರು, ತಾವು ಆಟದ ಮೇಲೆ ಪ್ರಭಾವ ಬೀರುತ್ತಾರೆ ಎಂಬ ಆರೋಪಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಮಾಡುತ್ತಲೇ ಇದ್ದಾರೆ. ಆದರೆ ಅಂಥ ಆರೋಪಗಳಿಗೆ ತಾವು ಹೆಚ್ಚು ಮಹತ್ವ ನೀಡುವುದಿಲ್ಲ ಎಂಬರ್ಥದಲ್ಲಿ ಪ್ರತಿಕ್ರಿಯಿಸಿದರು.

ಇದೇ ವೇಳೆ, ಬಿಗ್‌ಬಾಸ್ ಮನೆಯಲ್ಲಿ ಗಂಭೀರ ತಪ್ಪುಗಳನ್ನು ಮಾಡಿದವರು ಹಲವರಿದ್ದಾರೆ ಎಂದು ಸುದೀಪ್ ಗಮನಸೆಳೆದರು. ಮಂಜ ತಪ್ಪು ಮಾಡಿದ್ದು ನಿಜ, ಆತನನ್ನು ತಿದ್ದಲು ಪ್ರಯತ್ನಿಸಿದರೂ ಆತ ಮತ್ತೆ ತಪ್ಪುಗಳನ್ನು ಮಾಡಿದ್ದಾನೆ. ಆದರೆ ತಪ್ಪು ಮಾಡಿದವನು ಮಂಜ ಒಬ್ಬನೇ ಅಲ್ಲ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು. ಸುದೀಪ್ ಅವರ ಈ ಹೇಳಿಕೆ ಇದೀಗ ಬಿಗ್‌ಬಾಸ್ ಅಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾಗುವ ಸಾಧ್ಯತೆಯಿದೆ.

By Ravikumar - 12-10-2026


Ads in Post