Search


ಎಷ್ಟು ದಿನ ಬದುಕಿರ್ತೀನೋ ಗೊತ್ತಿಲ್ಲ, ಆದರೆ ಚುನಾವಣೆಗೆ ನಿಲ್ಲಲ್ಲ; ಚುನಾವಣಾ ವ್ಯವಸ್ಥೆ ಬಗ್ಗೆ ಸಿದ್ದರಾಮಯ್ಯ ಆಕ್ರೋಶ

ತುಮಕೂರು: ಮುಂದಿನ ದಿನಗಳಲ್ಲಿ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಮಹತ್ವದ ಹೇಳಿಕೆ ನೀಡಿರುವ  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಚುನಾವಣಾ ವ್ಯವಸ್ಥೆ ದುಬಾರಿಯಾಗಿದ್ದು, ಚುನಾವಣೆ ಎದುರಿಸಲು ಟನ್‌ಗಟ್ಟಲೆ ಹಣ ಬೇಕಾಗುತ್ತಿದೆ ಎಂದು ಹೇಳಿದ್ದಾರೆ. ತುಮಕೂರಿನಲ್ಲಿ ನಡೆದ ದಿವಂಗತ ಮಾಜಿ ಸಚಿವ ವೀರಣ್ಣ ಅವರ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿದ್ದರಾಮಯ್ಯ, “ನಾನು ಇನ್ನು ಮುಂದೆ ಲೋಕಸಭೆಗೂ ನಿಲ್ಲುವುದಿಲ್ಲ, ವಿಧಾನಸಭೆಗೂ ನಿಲ್ಲುವುದಿಲ್ಲ. ಆದರೆ ರಾಜಕಾರಣದಲ್ಲಿ ಸಕ್ರಿಯವಾಗಿ ಇರುತ್ತೇನೆ” ಎಂದು ಹೇಳಿದ್ದಾರೆ.

ಚುನಾವಣೆಯಲ್ಲಿ ಸ್ಪರ್ಧಿಸಲು ದೊಡ್ಡ ಪ್ರಮಾಣದ ಹಣದ ಅಗತ್ಯವಿದೆ. ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ತರದೇ ಹೋದರೆ ಪ್ರಾಮಾಣಿಕವಾಗಿ ರಾಜಕಾರಣದಲ್ಲಿ ಮುಂದುವರಿಯುವುದು ಕಷ್ಟವಾಗುತ್ತದೆ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ತಮ್ಮ ವಯಸ್ಸಿನ ಬಗ್ಗೆಯೂ ಮಾತನಾಡಿದ ಅವರು, “ನನಗೆ ಈಗ 80 ವರ್ಷ. ನಾನು ಆರೋಗ್ಯವಾಗಿದ್ದೇನೆ. ಇನ್ನೆಷ್ಟು ವರ್ಷ ಬದುಕಿರುತ್ತೇನೆ ಎಂಬುದು ಗೊತ್ತಿಲ್ಲ. ಮುಂದಿನ ಚುನಾವಣೆಗೆ ನಿಲ್ಲಬಾರದು ಎಂದು ಯೋಚಿಸಿದ್ದೇನೆ” ಎಂದರು.

ತಮ್ಮ ರಾಜಕೀಯ ಜೀವನದ ಚುನಾವಣಾ ಅನುಭವವನ್ನು ಹಂಚಿಕೊಂಡ ಸಿದ್ದರಾಮಯ್ಯ, 1991ರಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದನ್ನು ನೆನಪಿಸಿಕೊಂಡರು. ಆ ಚುನಾವಣೆಯಲ್ಲಿ ಸುಮಾರು 10 ಸಾವಿರ ಮತಗಳ ಅಂತರದಿಂದ ಸೋತಿದ್ದೆ. ಆಗ ಹೆಗಡೆ ಅವರೂ ಸೋತಿದ್ದರು ಎಂದು ಹೇಳಿದರು. ಇನ್ನು ಮುಂದೆ ಯಾವುದೇ ಲೋಕಸಭಾ ಚುನಾವಣೆಗೆ ಸ್ಪರ್ಧಿಸಬಾರದು ಎಂಬ ತೀರ್ಮಾನಕ್ಕೆ ಆಗಲೇ ಬಂದಿದ್ದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಹಣದ ರಾಜಕಾರಣಕ್ಕೆ ಕಡಿವಾಣ ಅಗತ್ಯ

1983ರಿಂದ 2023ರವರೆಗಿನ ಚುನಾವಣಾ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಚುನಾವಣೆಯಲ್ಲಿ ಅಕ್ರಮವಾಗಿ ಹಣ ಖರ್ಚು ಮಾಡುವ ಪ್ರವೃತ್ತಿಗೆ ಕಡಿವಾಣ ಹಾಕಬೇಕು. ಚುನಾವಣಾ ಆಯೋಗ ನಿಗದಿಪಡಿಸಿರುವ ಮಿತಿಯೊಳಗೆ ಮಾತ್ರ ಹಣ ಖರ್ಚು ಮಾಡುವಂತಾಗಬೇಕು ಎಂದು ಸಿದ್ದರಾಮಯ್ಯ ಹೇಳಿದರು. ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ತರಲು ರಾಜಕೀಯ ಪಕ್ಷಗಳು ಮಾತ್ರವಲ್ಲದೆ ಜನರೂ ಸಹಕಾರ ನೀಡಬೇಕು. ಹಣದ ಪ್ರಭಾವ ಕಡಿಮೆಯಾದಾಗ ಮಾತ್ರ ಪ್ರಾಮಾಣಿಕ ರಾಜಕಾರಣಕ್ಕೆ ಹೆಚ್ಚಿನ ಅವಕಾಶ ಸಿಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

By Ravikumar - 30-08-2026


Ads in Post