ದಾವಣಗೆರೆ: ಇನ್ನೂ 25 ವರ್ಷಗಳ ಬಳಿಕ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ಇದೆ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ. ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಶಿಕ್ಷಣ ಕ್ಷೇತ್ರ ಉದ್ಯಮವಾಗಿ ಬದಲಾಗುತ್ತಿರುವ ವಿಚಾರಕ್ಕೆ 2028ರಲ್ಲಿ ಉತ್ತರ ನೀಡುತ್ತೇನೆ ಎಂದು ಹೇಳಿದ ಅವರು, ಶಿಕ್ಷಣ ಸುಧಾರಣಾ ಸಬ್ಕಮಿಟಿಗೆ ಹಲವು ಸಲಹೆಗಳನ್ನು ನೀಡಿದ್ದೇನೆ. ಸಚಿವ ಸ್ಥಾನ ನೀಡಿದರೆ ಉತ್ತಮವಾಗಿ ಕೆಲಸ ಮಾಡಿ ತೋರಿಸುವುದಾಗಿ ತಿಳಿಸಿದರು.
ತಮ್ಮ ಕ್ಷೇತ್ರದ ಸರ್ಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟದ ಕುರಿತು ಮಾತನಾಡಿದ ಅವರು, 7ನೇ ತರಗತಿಯಲ್ಲಿ ಓದುತ್ತಿರುವ 359 ವಿದ್ಯಾರ್ಥಿಗಳಿಗೆ ವರ್ಣಮಾಲೆಯೇ ತಿಳಿದಿಲ್ಲ ಎಂಬುದು ಗಮನಕ್ಕೆ ಬಂದಿದೆ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಸರ್ಕಾರಿ ಶಾಲಾ ಶಿಕ್ಷಕರಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು. 25 ವರ್ಷಗಳ ಬಳಿಕ ಸಿಎಂ ಆಗಬೇಕು ಎಂಬ ಬಯಕೆ ಇದೆ. ಅದಕ್ಕೂ ಮುನ್ನ ಸಚಿವ ಸ್ಥಾನ ಸಿಕ್ಕರೂ ಕೆಲಸ ಮಾಡಿ ತೋರಿಸುವುದಾಗಿ ಪುನರುಚ್ಚರಿಸಿದರು.
ಚುನಾವಣಾ ಆಯೋಗದ ಕುರಿತು ನಡೆಯುತ್ತಿರುವ ಚರ್ಚೆಗೆ ಪ್ರತಿಕ್ರಿಯಿಸಿದ ಪ್ರದೀಪ್ ಈಶ್ವರ್, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಬಿಜೆಪಿ ಪರವಾಗಿ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು. ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ ಎಂಬ ಪ್ರತಿಪಕ್ಷಗಳ ಆರೋಪವನ್ನು ತಳ್ಳಿಹಾಕಿದ ಅವರು, ರಾಜ್ಯದ ಖಜಾನೆ ಖಾಲಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ಬಿಜೆಪಿ ಆಂತರಿಕ ವಿಚಾರದ ಬಗ್ಗೆಯೂ ಮಾತನಾಡಿದ ಪ್ರದೀಪ್ ಈಶ್ವರ್, ಆರ್. ಅಶೋಕ್ ಅವರು ವಿಪಕ್ಷ ನಾಯಕರಾಗಲು ಸೂಕ್ತರಲ್ಲ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಸುನೀಲ್ ಕುಮಾರ್ ಅವರು ವಿಪಕ್ಷ ನಾಯಕರಾಗಲಿದ್ದಾರೆ ಹಾಗೂ ಸೋಮಣ್ಣ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಲಿದ್ದಾರೆ ಎಂದು ಭವಿಷ್ಯ ನುಡಿದರು.