ನವದೆಹಲಿ: ದೆಹಲಿ ಪೊಲೀಸರ ವಶದಿಂದ ಬಿಡುಗಡೆಯಾದ ಬಳಿಕ ಯೂಟ್ಯೂಬರ್ ಧ್ರುವ್ ರಾಠಿ ಅವರು ತಮ್ಮನ್ನು ಪೊಲೀಸರು ಕಾನೂನುಬದ್ಧವಾಗಿ ಬಂಧಿಸುವ ಬದಲು ಅಪಹರಣ ಮಾಡಿದಂತೆ ಕರೆದೊಯ್ದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಭಾನುವಾರ ಬೆಳಗಿನ ಜಾವ ಸುಮಾರು 3 ಗಂಟೆಗೆ ಬಿಡುಗಡೆಯಾದ ಬಳಿಕ ಅವರು ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡು ನಡೆದ ಘಟನೆಯ ಬಗ್ಗೆ ವಿವರಿಸಿದ್ದಾರೆ.
ಗುರುಗ್ರಾಮ್ನಲ್ಲಿರುವ ತಮ್ಮ ನಿವಾಸದಲ್ಲಿ ಮಲಗಿದ್ದಾಗ ಪೊಲೀಸರು ಏಕಾಏಕಿ ಬಂದು ವಶಕ್ಕೆ ಪಡೆದಿದ್ದಾರೆ ಎಂದು ಧ್ರುವ್ ರಾಠಿ ಹೇಳಿದ್ದಾರೆ. ಶನಿವಾರ ಬೆಳಗ್ಗೆ ಸುಮಾರು 7 ಗಂಟೆಗೆ ಸಾಮಾನ್ಯ ಉಡುಪಿನಲ್ಲಿದ್ದ 20 ಮಂದಿ ತಮ್ಮ ಮಲಗುವ ಕೋಣೆಗೆ ಪ್ರವೇಶಿಸಿ, ಅಲ್ಲಿಂದ ತಮ್ಮನ್ನು ಕರೆದೊಯ್ದರು. ಕಾನೂನುಬದ್ಧ ಬಂಧನದ ಪ್ರಕ್ರಿಯೆ ಅನುಸರಿಸದೆ ಅಪರಿಚಿತರು ಅಪಹರಿಸಿದ ರೀತಿಯಲ್ಲಿ ನಡೆದುಕೊಂಡರು ಎಂದು ಅವರು ಆರೋಪಿಸಿದ್ದಾರೆ.
ತಮ್ಮನ್ನು ಹಲವು ಪೊಲೀಸ್ ಠಾಣೆಗಳಿಗೆ ಸ್ಥಳಾಂತರಿಸಲಾಗಿದ್ದು, ಸುಮಾರು 22ರಿಂದ 23 ಗಂಟೆಗಳ ಕಾಲ ವಕೀಲರು ಅಥವಾ ಕುಟುಂಬದ ಸದಸ್ಯರನ್ನು ಸಂಪರ್ಕಿಸಲು ಅವಕಾಶ ನೀಡಲಿಲ್ಲ ಎಂದು ಧ್ರುವ್ ರಾಠಿ ತಿಳಿಸಿದ್ದಾರೆ. ಮನೆಯಿಂದ ಹೊರಗೆ ಕರೆದೊಯ್ಯುವ ಸಂದರ್ಭದಲ್ಲಿ ಸಣ್ಣಪುಟ್ಟ ಗಾಯಗಳೂ ಆಗಿವೆ ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ. ತಮ್ಮ ಪಾಸ್ಪೋರ್ಟ್ ತೋರಿಸಿದ ಅವರು, ತಾವು ಭಾರತೀಯ ಪ್ರಜೆಯಾಗಿದ್ದು, ಶಾಂತಿಯುತ ಪ್ರತಿಭಟನೆ ಹಾಗೂ ಪ್ರಜಾಪ್ರಭುತ್ವ ಚಳವಳಿಗಳಲ್ಲಿ ಭಾಗವಹಿಸುವುದು ತಮ್ಮ ಮೂಲಭೂತ ಹಕ್ಕು ಎಂದು ಪ್ರತಿಪಾದಿಸಿದ್ದಾರೆ.
ಇನ್ನೊಂದೆಡೆ, ನಿಷೇಧಾಜ್ಞೆಗಳ ನಡುವೆಯೂ ಪ್ರತಿಭಟನಾಕಾರರು ಗುಂಪುಗೂಡುವುದನ್ನು ತಡೆಯಲು ದೆಹಲಿ ಪೊಲೀಸರು ರಾಷ್ಟ್ರ ರಾಜಧಾನಿಯಾದ್ಯಂತ ಭದ್ರತೆಯನ್ನು ಹೆಚ್ಚಿಸಿದ್ದರು. ಇದೇ ಹಿನ್ನೆಲೆಯಲ್ಲಿ ಗುರುಗ್ರಾಮ್ನಲ್ಲಿರುವ ಧ್ರುವ್ ರಾಠಿ ಅವರ ನಿವಾಸದಿಂದ ಅವರನ್ನು ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೆ ಪಡೆಯಲಾಗಿತ್ತು ಎಂದು ವರದಿಯಾಗಿದೆ. ಬಿಡುಗಡೆಗೊಂಡಿದ್ದರೂ ನಿಷೇಧಾಜ್ಞೆಗಳನ್ನು ಉಲ್ಲಂಘಿಸಿದರೆ ಅಥವಾ ಜಂತರ್ ಮಂತರ್ನ ಪ್ರತಿಭಟನಾ ಸ್ಥಳಕ್ಕೆ ಮತ್ತೆ ಪ್ರವೇಶಿಸಲು ಪ್ರಯತ್ನಿಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ಎಚ್ಚರಿಕೆ ನೀಡಿವೆ.